ಬಂಟ್ವಾಳ: ತಿಂಗಳಲ್ಲಿ 1 ಕೊಲೆ , 1 ಕೊಲೆ ಯತ್ನ, ಮೂರು ಚೂರಿ ಇರಿತ
ಮಂಗಳೂರು, ಜೂ. 21: ಕಲ್ಲಡ್ಕವನ್ನು ಕೇಂದ್ರವಾಗಿಟ್ಟುಕೊಂಡು ಕೋಮು ಭಾವನೆಗಳನ್ನು ಕೆರಳಿಸುವ ಘಟನೆಗಳು ಪದೇ ಪದೇ ನಡೆಯುತ್ತಿವೆ. ಒಂದು ತಿಂಗಳಲ್ಲೇ ಒಂದು ಕೊಲೆ, ಒಂದು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನ ಮತ್ತು ಮೂರು ಚೂರಿ ಇರಿತ ಪ್ರಕರಣಗಳು ನಡೆದಿವೆ.
ಮೇ 26ರಂದು ಕಲ್ಲಡ್ಕದಲ್ಲಿ ಮುಹಮ್ಮದ್ ಹಾಶಿರ್ ಮತ್ತು ಮಾಶೂಕ್ ಎಂಬವರಿಗೆ ಚೂರಿ ಇರಿತ, ಜೂನ್ 13ರಂದು ಕಲ್ಲಡ್ಕದಲ್ಲಿ ಇಬ್ರಾಹೀಂ ಖಲೀಲ್ ಎಂಬಾತರಿಗೆ ಚೂರಿ ಇರಿತ, ಜೂ. 20ರಂದು ತುಂಬೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸುಮಾರು 18 ವರ್ಷ ಬಾಲಕನ ಮೇಲೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಯುವಕರಿಂದ ತಲವಾರು ಬೀಸಿ ಕೊಲೆಗೆ ಯತ್ನ ಹಾಗೂ ಜೂ. 21ರಂದು ಅಶ್ರಫ್ ಎಂಬವರ ಕಗ್ಗೊಲೆ.
ಅಲ್ಪ ಸಂಖ್ಯಾತರನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಘಟನೆಗಳ ಹಿಂದೆ ಕೋಮು ಗಲಭೆಯನ್ನು ಹುಟ್ಟುಹಾಕುವ ಹುನ್ನಾರ ಅಡಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಯಾರಿಗೋ ಚೂರಿ ಇರಿತ ನಡೆಸಿ ಅಥವಾ ಕೊಂದು ಕೋಮು ಘರ್ಷಣೆಯನ್ನುಂಟು ಮಾಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಪದೇ ಪದೇ ಸಂಭವಿಸುವ ಇಂತಹ ಘಟನೆಗಳಿಗೆ ಕಾರಣಕರ್ತರಾದ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇ ಕೆಂಬ ಆಗ್ರಹಗಳು ಕೇಳಿಬಂದಿವೆ.