ರೈತರ ಸಾಲ ಮನ್ನಾ: ಸರಕಾರದ ಕ್ರಮಕ್ಕೆ ಸ್ವಾಗತ

Update: 2017-06-21 15:42 GMT

ಉಡುಪಿ, ಜೂ.21: ಸಹಕಾರಿ ಬ್ಯಾಂಕ್‌ಗಳಿಂದ ರೈತರು ಪಡೆದಿರುವ ಬೆಳೆ ಸಾಲದಲ್ಲಿ 50,000 ರೂ.ಯನ್ನು ಮನ್ನಾ ಮಾಡಿರುವ ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹ ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ಹೇಳಿದೆ.

ಆದರೆ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಒಂದು ಲಕ್ಷ ರೂ.ಗೂ ಹೆಚ್ಚಿನ ಬೆಳೆ ಸಾಲವನ್ನು ಮನ್ನಾ ಮಾಡಿರುವಾಗ, ಕರ್ನಾಟಕ ಸರಕಾರ ಕೇವಲ 50,000 ರೂ. ಮನ್ನಾ ಮಾಡಿರುವ ಬಗ್ಗೆ ಮರು ಚಿಂತನೆ ನಡೆಸಬೇಕು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಬೆಳೆಸಾಲ ಪಡೆದ ರೈತರಿಗೂ ಇದರ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಾಗಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಭಾಕಿಸಂ ಅಭಿಪ್ರಾಯ ಪಟ್ಟಿದೆ.

ಈ ವರ್ಷ ರಾಜ್ಯ ಕಂಡ ಭೀಕರ ಬರಗಾಲದಿಂದ ಕೃಷಿಕರು ಕಂಗಾಲಾಗಿದ್ದು, ತಮ್ಮ ಜೀವನ ನಿರ್ವಾಹಣೆಗೆ ಬೇರೆ ಬೇರೆ ಭಾಗಗಳಿಗೆ ವಲಸೆ ಹೋಗಿರುವಾಗ, ತಾವು ಪಡೆದಿರುವ ಬೆಳೆಸಾಲವನ್ನು ತುಂಬುವುದು ಖಂಡಿತ ಸಾಧ್ಯವಿಲ್ಲ. ಈ ಕಾರಣಕ್ಕೆ ರೈತರನ್ನು ಒಂದು ಬಾರಿಗೆ ಸಾಲ ಮುಕ್ತರನ್ನಾಗಿ ಮಾಡುವಂತೆ ನಾವು ಸರಕಾರಕ್ಕೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದು ಅದಕ್ಕೆ ಸರಕಾರ ಸ್ಪಂದಿಸಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News