ಕೊಲೆಯಾದ ಅಶ್ರಫ್ ರನ್ನು ರೌಡಿಶೀಟರ್ ಮಾಡಿದ್ದು ಯಾರು?

Update: 2017-06-21 15:50 GMT

ಬಂಟ್ವಾಳ, ಜೂ. 21: ಮುಹಮ್ಮದ್ ಅಶ್ರಫ್ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದಂತೆ ಟಿವಿ ಚಾನೆಲ್‍ಗಳು ಯಾವುದೇ ಪೂರ್ವಪರ ಅರಿಯದೆ ರೌಡಿ ಶೀಟರ್ ಮುಹಮ್ಮದ್ ಅಶ್ರಫ್ ಕೊಲೆ ಎಂದು ಸುದ್ದಿ ಬಿತ್ತರಿಸಿರುವುದು ಭಾರೀ ಜನಾಕ್ರೋಶ ವ್ಯಕ್ತವಾಗಿದೆ.  

'ರೌಡಿ ಶೀಟರ್‍ನ ಬರ್ಬರ ಹತ್ಯೆ', 'ಎರಡು ಕೊಲೆ ಪ್ರಕರಣದ ಆರೋಪಿ ಅಶ್ರಫ್' ಎಂಬಿತ್ಯಾದಿಯಾಗಿ ಟಿವಿ ಚಾನೆಲ್‍ಗಳು ಬ್ರೇಕಿಂಗ್ ಸುದ್ದಿ ಪ್ರಕಡಿಸಿವೆ. ಇದು ಎಸ್‍ಡಿಪಿಐ ಪಕ್ಷದ ನಾಯಕರು, ಕಾರ್ಯಕರ್ತರು ಅಲ್ಲದೆ ಮುಸ್ಲಿಮ್ ಸಮಾಜದ ಮುಖಂಡರಲ್ಲಿ ಟಿವಿ ಚಾನಲ್‍ಗಳ ವಿರುದ್ಧ ಭಾರೀ ಆಕ್ರೋಶವನ್ನು ಉಂಟು ಮಾಡಿದೆ. 

ಮುಹಮ್ಮದ್ ಅಶ್ರಫ್‍ರನ್ನು ರೌಡಿ ಶೀಟರ್ ಎಂದು ಸುದ್ದಿ ಪ್ರಕಟಿಸಿದ ಟಿ.ವಿ.ಚಾನೆಲ್‍ಗಳಿಗೆ ಎಸ್‍ಡಿಪಿಐ ಮುಖಂಡರು ಕರೆ ಮಾಡಿ ವಿಚಾರಿಸಿದಾಗ ಹಾಗೆಂದು ಬಂಟ್ವಾಳ ಪೊಲೀಸರು ತಿಳಿಸಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. 

ಘಟನೆ ನಡೆದ ಕೂಡಲೇ ಕರೆ ಮಾಡಿದ ಎಲ್ಲ ಪತ್ರಕರ್ತರಿಗೆ ಬಂಟ್ವಾಳ ಪೊಲೀಸರು ಮುಹಮ್ಮದ್ ಅಶ್ರಫ್ ರೌಡಿ ಶೀಟರ್ ಆಗಿದ್ದಾನೆ ಎಂದು ಮಾಹಿತಿ ನೀಡಿದ್ದರು ಎನ್ನಲಾಗಿದೆ. 

ಎಸ್‍ಡಿಪಿಐ ಪಕ್ಷದ ಸಕ್ರಿಯ ಸದಸ್ಯನಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದ ಮುಹಮ್ಮದ್ ಅಶ್ರಫ್ ಅಮ್ಮುಂಜೆ ಗ್ರಾಮದ ಸರ್ವ ಧರ್ಮಿಯರಿಗೂ ಆತ್ಮೀಯನಾಗಿದ್ದರು. ಅಶ್ರಫ್ ಕೊಲೆಯಾಗುವ ಮೊದಲು ರಸ್ತೆ ದುರಸ್ಥಿಯ ಶ್ರಮದಾನ ನಡೆಸಿ ಬಾಡಿಗೆಗೆ ತೆರಳಿದ್ದರು. ಅದುವೇ ಅವರ ಸಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ಅಶ್ರಫ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆ ಸಹಿತ ಜಿಲ್ಲೆಯ ಯಾವುದೇ ಠಾಣೆಯಲ್ಲಿ ಈವರೆಗೆ ಒಂದೇ ಒಂದು ಕೇಸ್ ದಾಖಲಾಗಿಲ್ಲ. ಗಲಾಟೆ, ಕೇಸ್ ಅಂತ ಯಾವತ್ತೂ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ ವ್ಯಕ್ತಿಯೂ ಅಲ್ಲ. ಅಂತವರಿಗೆ ರೌಡಿ ಶೀಟರ್ ಪಟ್ಟ ಕಟ್ಟಿರುವ ಟಿವಿ ಚಾನೆಲ್‍ಗಳು ಮತ್ತು ಪೊಲೀಸರ ಕೋಮು ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ ಎಂದು ಎಸ್‍ಡಿಪಿಐ ಬಂಟ್ವಾಳ ವಿಧಾನಸಭಾ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್. ತಿಳಿಸಿದ್ದಾರೆ. 

ತುಂಬೆ ಘಟನೆಗೂ ಕೊಲೆಗೂ ಲಿಂಕ್? 
ಕೆಲಸ ಬಿಟ್ಟು ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದ ತುಂಬೆ ಗ್ರಾಮದ ಉನೈತ್ ಎಂಬ ಬಾಲಕನಿಗೆ ಇನ್ನೊಂದು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಕೆಳಗಿನ ತುಂಬೆಯಲ್ಲಿ ಮಂಗಳವಾರ ಸಂಜೆ ತಲವಾರು ಬೀಸಿ ಹಲ್ಲೆಗೆ ಯತ್ನಿಸಿದ್ದರು. ಬಳಿಕ ದುಷ್ಕರ್ಮಿಗಳು ಬೆಂಜನಪದವು ಕಡೆಗೆ ಬೈಕ್‍ನಲ್ಲಿ ಪರಾರಿಯಾಗಿದ್ದರು. 

ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ದುಷ್ಕರ್ಮಿಗಳು ಬಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದು ಅದು ಫಲಿಸದಿರುವುದರಿಂದ ಪೂರ್ವ ಸಂಚಿನಿಂತೆ ಅದೇ ಆರೋಪಿಗಳು ಸೇರಿ ಬುಧವಾರ ಮುಹಮ್ಮದ್ ಅಶ್ರಫ್ ರನ್ನು ಕೊಲೆ ನಡೆಸಿದ್ದಾರೆ ಎಂಬ ಶಂಕೆ ಸಾರ್ವಜನಿಕರಲ್ಲಿ ಮೂಡಿದೆ. 

ಕಟ್ಟುಕತೆ ಎಂದಿದ್ದ ಪೊಲೀಸ್: ದುಷ್ಕರ್ಮಿಗಳು ಬಾಲಕನಿಗೆ ತಲವಾರು ಬೀಸಿ ಪರಾರಿಯಾದ ಬಳಿಕ ಬಂಟ್ವಾಳ ಪೊಲೀಸರು ಆಸ್ಪತ್ರೆಗೆ ಹಾಗೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತದನಂತರ ಘಟನೆಯ ಬಗ್ಗೆ ಮಾಹಿತಿ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಬಂಟ್ವಾಳ ಪೊಲೀಸರಿಗೆ ಕರೆ ಮಾಡಿದಾಗ ಅದೊಂದು ಕಟ್ಟುಕತೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News