ಉಡುಪಿ ಮೈನ್ ಶಾಲೆ ಉಳಿಸಲು ಪ್ರಯತ್ನ: ಕೃಪಾ ಆಳ್ವ
ಉಡುಪಿ, ಜೂ.21: ದುರಸ್ತಿ ಕಾಣದ 130ವರ್ಷ ಹಳೆಯದಾದ ಉಡುಪಿ ನಗರದ ಸರಕಾರಿ ಮೈನ್ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಅಧಿಕಾರಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ತಿಳಿಸಿದ್ದಾರೆ.
ಮಣಿಪಾಲದ ರಜತಾದ್ರಿಯಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಶಾಲೆಯ ಕಟ್ಟಡಕ್ಕಿಂತ ನಮಗೆ ಮಕ್ಕಳು ಮುಖ್ಯವಾಗುತ್ತಾರೆ. ಆ ಶಾಲಾ ಕಟ್ಟಡದಿಂದ ಮಕ್ಕಳಿಗೆ ತೊಂದರೆ ಆಗುವುದಾದರೆ ಅಲ್ಲಿನ ಮಕ್ಕಳನ್ನು ಬೇರೆ ಶಾಲೆಗೆ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ತ್ರಾಸಿ ಮೊವಾಡಿಯಲ್ಲಿ ವರ್ಷದ ಹಿಂದೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಕ್ಕಳು ಮೃತಪಟ್ಟರೂ ಈವರೆಗೆ ಅಲ್ಲಿನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂಬ ಪ್ರಶ್ನೆಗೆ, ಇದು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದರೂ ಮಕ್ಕಳ ಸುರಕ್ಷತೆ ನಮಗೆ ಮುಖ್ಯವಾಗುತ್ತದೆ. ಆದುದ ರಿಂದ ಪೊಲೀಸ್, ಶಾಲೆ ಅಥವಾ ಸಂಬಂಧಪಟ್ಟ ಇಲಾಖೆಗೆ ಜಿಲ್ಲಾಧಿಕಾರಿ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಪತ್ರ ಬರೆಸಿ ಈ ಮಳೆ ಗಾಲದೊಳಗೆ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಮಕ್ಕಳೇ ಶೌಚಾಲಯ ತೊಳೆಯುವ ಕುರಿತ ಪ್ರಶ್ನೆಗೆ, ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಲ್ಲಿ ಬರುವುದಿಲ್ಲ. ಆದುದರಿಂದ ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು. ಆಟೋರಿಕ್ಷಾದಲ್ಲಿ ಹೆಚ್ಚು ಸಂಖ್ಯೆಯ ಮಕ್ಕಳನ್ನು ಕರೆದುಕೊಂಡು ಹೋಗುವ ಬಗ್ಗೆ ಪರಿಶೀಲನೆ ಮಾಡಿ ಕ್ರಮಕ್ಕೆ ಸೂಚನೆ ನೀಡ ಲಾಗುವುದು ಎಂದು ಕೃಪಾ ಆಳ್ವ ತಿಳಿಸಿದರು.