ಸಂಸತ್ತಿನಲ್ಲಿ ಮಾತನಾಡುತ್ತಲೇ ಮಗುವಿಗೆ ಎದೆಹಾಲುಣಿಸಿದ ಸೆನೆಟರ್

Update: 2017-06-22 08:17 GMT

ಸಿಡ್ನಿ,ಜೂ.22 : ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಗೊತ್ತುವಳಿಯೊಂದನ್ನು ಮಂಡಿಸುವ ವೇಳೆ ಮಗುವೊಂದಕ್ಕೆ ಎದೆ ಹಾಲುಣಿಸಿದ ಮೊದಲ ಸೆನೆಟರ್ ಎಂಬ ಹೆಗ್ಗಳಿಕೆಗೆ ಲರಿಸ್ಸಾ ವಾಟರ್ಸ್ ಪಾತ್ರರಾಗಿದ್ದಾರೆ.

ಗುರುವಾರ ಬ್ಲ್ಯಾಕ್ ಲಂಗ್ ಡಿಸೀಸ್ ಅಥವಾ ಕಪ್ಪು ಶ್ವಾಸಕೋಶ ರೋಗದ ಬಗ್ಗೆ ಗೊತ್ತುವಳಿಯೊಂದನ್ನು ಮಂಡಿಸಿದ ಕ್ವೀನ್ಸ್ ಲ್ಯಾಂಡ್ ಮೂಲದ ಲರಿಸ್ಸಾ ತನ್ನ ಮೂರು ತಿಂಗಳ ಪುಟ್ಟ ಮಗಳು ಆಲಿಯಾ ಜಾಯ್ ಳನ್ನು ಕೈಯ್ಯಲ್ಲಿ ಹಿಡಿದುಕೊಂಡು ತನ್ನ ಭುಜದ ಮೇಲೊಂದು ಟವೆಲ್ ಇಳಿಸಿ ಮಗುವಿಗೆ ಎದೆ ಹಾಲುಣಿಸಿದರು. ಆಕೆಯ ಸಹ ಸೆನೆಟರುಗಳು ಆಕೆಯ ಈ ಕಾರ್ಯವನ್ನು ಪ್ರಶಂಸಿಸಿದ್ದಾರೆ. ನಂತರ ಸೆನೆಟರ್ ರಿಚರ್ಡ್ ಡಿ ನಟಾಲೆ ಅವರು ಮಗುವನ್ನು ಸಂತಸದಿಂದ ಎತ್ತಿದ್ದರು.

ಲರಿಸ್ಸಾ ಟ್ವಿಟ್ಟರಿನಲ್ಲಿ ಈ ವಿಷಯ ಬರೆದು ಫೋಟೋ ಕೂಡ ಪೋಸ್ಟ್ ಮಾಡಿದ್ದಾರೆ. ಆಕೆಗೆ ಟ್ವಿಟ್ಟರಿನಲ್ಲಿ 30,000 ಫಾಲೋವರ್ಸ್ ಇದ್ದಾರೆ.

‘‘ಪ್ರಥಮ ಬಾರಿಗೆ ಸಂಸತ್ತಿನಲ್ಲಿ ಗೊತ್ತುವಳಿಯೊಂದನ್ನು ಎದೆ ಹಾಲುಣಿಸುವಾಗ ಮಂಡಿಸಿದೆ. ನನ್ನ ಪಾಲುದಾರೆ (ಮಗು) ಮೋಷನ್(ಗೊತ್ತುವಳಿ) ಮಂಡನೆಯಾಗುವ ಮೊದಲೇ ಆಕೆಯ ಮೋಷನ್ ಮಂಡಿಸಿದಳು. ಆಕೆಯನ್ನು ಆಶೀರ್ವದಿಸಿ,’’ ಎಂದು ಹಾಸ್ಯಭರಿತವಾಗಿ ಪೋಸ್ಟ್ ಮಾಡಿದ್ದಾರೆ.

ಆಲಿಯಾ ಸೆನೇಟ್ ಚೇಂಬರಿಗೆ ಆಗಾಗ ಬರುತ್ತಿದ್ದು ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಎದೆ ಹಾಲುಣಿಸಲ್ಪಟ್ಟ ಪ್ರಪ್ರಥಮ ಮಗುವೆಂಬ ಖ್ಯಾತಿ ಅವಳ ಪಾಲಿಗೆ ಒಲಿದು ಬಂದಿದೆ.

ಈ ವರ್ಷದ ಮೇ ತಿಂಗಳಲ್ಲಿ ಆಲಿಯಾ ಮೊದಲ ಬಾರಿಗೆ ಸೆನೆಟಿಗೆ ಬಂದಿದ್ದಳು. ನಂತರ ಆಕೆ ಸೆನೆಟಿನಲ್ಲಿ ಹಲವಾರು ಬಾರಿ ಹಾಜರಿದ್ದಳಲ್ಲದೆ ರಾಜಕಾರಣಿಗಳು ಹಾಗೂ ಪತ್ರಕರ್ತರು ಆಯೋಜಿಸಿದ್ದ ಚ್ಯಾರಿಟಿ ಕಾರ್ಯಕ್ರಮ ಮಿಡ್ ವಿಂಟರ್ ಬಾಲ್ ಸಮಾರಂಭಕ್ಕೂ ತನ್ನ ತಾಯಿ ಜೊತೆಗೆ ಆಗಮಿಸಿದ್ದಳು.

ಪುಟ್ಟ ಮಕ್ಕಳಿರುವ ಸೆನೆಟರುಗಳು ತಮ್ಮ ಮಕ್ಕಳ ಪಾಲನೆಯನ್ನು ಸ್ವಲ್ಪ ಹೊತ್ತು ಸೆನೆಟಿನಲ್ಲಿ ಮಾಡಲು ಅನುವು ಮಾಡಿಕೊಡಲು ಸೆನೆಟ್ ನಿಯಮಗಳಲ್ಲಿ ಬದಲಾವಣೆ ತರಲು ಕಳೆದ ವರ್ಷ ಲರಿಸ್ಸಾ ಶ್ರಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News