×
Ad

ಸಂತ ಅಲೋಶಿಯಸ್ ಕಾಲೇಜು ರಸ್ತೆ ಬದಲಾವಣೆ ಬೇಡ

Update: 2017-06-22 16:01 IST

ಮಂಗಳೂರು, ಜೂ.22: ನಗರದ ಅಂಬೇಡ್ಕರ್ ವೃತ್ತದಿಂದ  ಲೈಟ್‌ಹೌಸ್- ಕ್ಯಾಥಲಿಕ್ ಕ್ಲಬ್‌ ವರೆಗಿನ ರಸ್ತೆಯನ್ನು ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಿಂದ ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ಇದೀಗ ರಸ್ತೆಯನ್ನು ಬೇರೆ ಹೆಸರಿನಲ್ಲಿ ನಾಮಕರಣ ಮಾಡಲು ಮುಂದಾಗಿರುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಅಲೋಶಿಯಸ್ ಸಮೂಹ ಸಂಸ್ಥೆಗಳು ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಒತ್ತಾಯಿಸಿದೆ.

ಕಾಲೇಜಿನ ಸಭಾಂಗಣದಲ್ಲಿ ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ರೆ.ಫಾ. ಡೈನೀಶಿಯಸ್ ವಾಝ್, ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆವರೆಗಿನ ರಸ್ತೆಯು ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂಬ ಹೆಗ್ಗುರುತಿನೊಂದಿಗೆ ಗುರುತಿಸಲ್ಪಡುತ್ತಿದೆ. ಅದನ್ನು ಬದಲಾವಣೆ ಮಾಡಲು ಮುಂದಾಗಿರುವುದು ಬೇಸರ ತಂದಿದೆ ಎಂದರು.

ಈ ರಸ್ತೆ ಹಿಂದೆ ಲೈಟ್ ಹೌಸ್ ಹಿಲ್ ರಸ್ತೆ ಎಂಬುದಾಗಿ ಕರೆಯಲ್ಪಡುತ್ತಿತ್ತು. ಬಳಿಕ ರಸ್ತೆಯನ್ನು ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂಬುದಾಗಿ ನಾಮಕರಣ ಮಾಡಿ ರಸ್ತೆಗೆ ನಾಮಫಲಕ ಕೂಡಾ ಹಾಕಲಾಗಿದೆ. ಆದರೆ ಇದೀಗ ಕನಿಷ್ಠ ಸಂಸ್ಥೆಯ ಗಮನಕ್ಕೂ ತಾರದೆ ರಸ್ತೆಗೆ ದಿ. ಮುಲ್ಕಿ ಸುಂದರರಾಮ ಎಂಬುದಾಗಿ ನಾಮಕರಣಗೊಳಿಸಲು ಸರಕಾರ ಆದೇಶಿಸಿರುವುದಾಗಿ ಪತ್ರಿಕೆಯೊಂದರಲ್ಲಿ ಓದಿ ನೋವಾಗಿದೆ. ಈ ಬಗ್ಗೆ ಈಗಾಗಲೇ ಮನಪಾ ಮೇಯರ್ ಸೇರಿದಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ದಿ. ಸುಂದರಾಮ ಶೆಟ್ಟಿಯವರ ಬಗ್ಗೆ ಸಂಸ್ಥೆಗೆ ಅಪಾರ ಗೌರವ ಇದೆ. ಅವರ ಹೆಸರಿನ ಬಗ್ಗೆ ವಿವಾದ ಉಂಟು ಮಾಡುವುದು ನಮ್ಮ ಉದ್ದೇಶವಲ್ಲ. ಆದರೆ ಸಂತ ಅಲೋಶಿಯಸ್ ಕಾಲೇಜು ಸಮಾಜಕ್ಕೆ ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೆ ನೀಡಿದ ಸೇವೆ ಅನನ್ಯ. ಶಿಕ್ಷಣ ಕ್ಷೇತ್ರದಲ್ಲಿ 137 ವರ್ಷಗಳ ಇತಿಹಾಸವನ್ನು ಹೊಂದಿರುವ ಸಂತ ಅಲೋಶಿಯಸ್ ಕಾಲೇಜಿನ ವಿವಿಧ ಸಮೂಹ ಸಂಸ್ಥೆಗಳಲ್ಲಿ 14 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿರುವ ಸಂತ ಅಲೋಶಿಯಸ್‌ಗೆ ಗೌರವ ನೀಡುವ ನಿಟ್ಟಿನಲ್ಲಿ ಈಗಿರುವಂತೆಯೇ ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂಬುದಾಗಿಯೇ ಅಧಿಕೃತವಾಗಿ ನಾಮಕರಣ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಿ.ಟಿ.ಎಂ.ಎ. ಪೈ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದ ಕೆ.ಎಸ್. ಹೆಗ್ಡೆ, ವಿನಯ ಹೆಗ್ಡೆ, ಲೋಕಾಯುಕ್ತರಾಗಿ ಹೆಸರು ಮಾಡಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಜಾರ್ಜ್ ಫೆರ್ನಾಂಡಿಸ್, ಅನಂತ ಕೃಷ್ಣ, ಯೆನಪೋಯ ಅಬ್ದುಲ್ಲಾ ಕುಂಞಿ, ಡಾ. ಶಾಂತಾರಾಮ ಶೆಟ್ಟಿ ಸೇರಿದಂತೆ ಸಾವಿರಾರು ಮಂದಿ ವ್ಯಾಸಂಗ ಮಾಡಿದವರು ದೇಶ ವಿದೇಶಗಳಲ್ಲಿ ಗಣ್ಯರಾಗಿ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಪ್ರಸ್ತುತ ಕಾಲೇಜಿನಲ್ಲಿ ದೇಶ ವಿದೇಶಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ ಅಲೋಶಿಯಸ್ ಚಾಪೆಲ್
ಅಲೋಶಿಯಸ್ ಕಾಲೇಜಿನ ಚಾಪೆಲ್ ಹಾಗೂ ಅಪರೂಪದ ಪೈಂಟಿಂಗ್ ವಿಶ್ವದಾದ್ಯಂತ ಹೆಸರು ಪಡೆದಿದೆ. ಇದರ ವೀಕ್ಷಣೆಗಾಗಿ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಈ ರೀತಿಯಾಗಿ ಹಲವಾರು ರೀತಿಯಲ್ಲಿ ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಂಸ್ಥೆಯ ಹೆಸರನ್ನು ಪ್ರಸ್ತುತ ಇರುವ ರಸ್ತೆಗೆ ಮುಂದುವರಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲ ರೆ.ಫಾ. ಪ್ರವೀಣ್ ಮಾರ್ಟಿಸ್ ಒತ್ತಾಯಿಸಿದರು.

ಅಂಬೇಡ್ಕರ್ ವೃತ್ತದಿಂದ ಬಂಟ್ಸ್‌ ಹಾಸ್ಟೆಲ್‌ವರೆಗಿನ ರಸ್ತೆಗೆ ದಿ. ಮುಲ್ಕಿ ಸುಂದರರಾಮ ಶೆಟ್ಟಿ ನಾಮಕರಣಕ್ಕೆ ತಮ್ಮ ಅಭ್ಯಂತರವಿಲ್ಲ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಗಮನ ಹರಿಸಬೇಕು ಎಂದು ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಎನ್.ಜಿ. ಮೋಹನ್ ಅಭಿಪ್ರಾಯಿಸಿದರು.

ಗೋಷ್ಠಿಯಲ್ಲಿ ಕುಲ ಸಚಿವ ಡಾ.ಎ.ಎಂ. ನರಹರಿ, ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆರ್ಚಿಬಾಲ್ಡ್ ಮೆನೆಜಸ್, ಉಪ ಪ್ರಾಂಶುಪಾಲ ರೆ.ಫಾ. ಮೆಲ್ವಿನ್ ಪಿಂಟೋ, ಹಣಕಾಸು ಅಧಿಕಾರಿ ರೆ.ಫಾ. ಪ್ರದೀಪ್ ಸಿಕ್ವೇರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News