ದ.ಕ. ಜಿಲ್ಲೆಯಲ್ಲಿ ವಾಡಿಕೆಯ ಮಳೆಗಿಂತ ಕಡಿಮೆ ಮಳೆ

Update: 2017-06-22 11:49 GMT

ಮಂಗಳೂರು, ಜೂ. 22: ಜಿಲ್ಲೆಯಲ್ಲಿ ವಾಡಿಕೆಯ ಮಳೆಯಿಂದ ಈ ಬಾರಿ 502.3 ಮಿ.ಮೀ ಕಡಿಮೆ ಮಳೆ ಸುರಿದಿದೆ. ವಾಡಿಕೆ ಮಳೆಯ ಪ್ರಕಾರ 1176.2ಮಿ.ಮೀ ಮಳೆಯಾಗಬೇಕಾಗಿತ್ತು. ಅದರೆ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಒಟ್ಟು ಮಳೆಯ ಪ್ರಮಾಣ 673.9 ಮಿ.ಮೀ ಆಗಿದೆ. ಜೂನ್ ತಿಂಗಳೊಂದರಲ್ಲಿಯೇ ಸುರಿಯುವ ವಾಡಿಕೆ ಮಳೆ 941.8 ಮಿ.ಮೀ ಆದರೆ ಈ ಬಾರಿ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಕೇವಲ 495.3 ಮಿ.ಮೀ ಮಳೆ ಸುರಿದಿದೆ.

ಜೂನ್ ತಿಂಗಳ ವಾಡಿಕೆಯ ಮಳೆಗಿಂತ ಈ ಬಾರಿ 446.5 ಮಿ.ಮೀ ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಕ್ಕಿಂತ ಈ ಬಾರಿ ಜನವರಿಯಿಂದ ಇದುವರೆಗೆ ಸುರಿದ ಮಳೆ ಪ್ರಮಾಣ 69.3 ಮಿ.ಮೀ ಹೆಚ್ಚಾಗಿದೆ. ಕಳೆದ ಜನವರಿಯಿಂದ ಜೂನ್‌ವರೆಗೆ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ 624.7ಮಿ.ಮೀ, ಬೆಳ್ತಂಗಡಿ ಯಲ್ಲಿ 760.8 ಮಿ.ಮೀ, ಮಂಗಳೂರಿನಲ್ಲಿ 668.0, ಪುತ್ತೂರು ನಲ್ಲಿ 639.6 ಮತ್ತು ಸುಳ್ಯ ತಾಲೂಕಿನಲ್ಲಿ 676.6 ಮಿ.ಮೀ ಮಳೆ ಸುರಿದಿದೆ.

ಕಳೆದ ಮೂರು ದಿನಗಳಿಂದ ಮಳೆ ಪ್ರಮಾಣ ಕುಂಠಿತಗೊಂಡಿದ್ದು ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಈ ಬಾರಿ ಬೇಗನೆ ಸುರಿದ ಮಳೆಯಿಂದಾಗಿ ಮುಂಗಾರಿನ ಭತ್ತದ ಬೆಳೆಯ ಬಿತ್ತನೆಗೆ ಅನುಕೂಲವಾಗಲಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರಿನಲ್ಲಿ 33 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆ ಬೆಳೆಯುವ ಗುರಿ ಹೊಂದಲಾಗಿತ್ತು.ಆ ಪ್ರಕಾರ 28ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ.ಈ ವರ್ಷ ಮುಂಗಾರಿನಲ್ಲಿ ಒಟ್ಟು 28,700 ಹೆಕ್ಟೇರ್‌ನಲ್ಲಿ ಭತ್ತ ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News