ಅಮುಂಜೆ ಅಶ್ರಫ್ ಹತ್ಯೆ ಖಂಡನೀಯ: ಶಾಸಕ ಮೊಯ್ದಿನ್ ಬಾವ
ಮುಂಬೈ, ಜೂ. 22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಅಮಾಯಕ ಯುವಕರ ಹತ್ಯೆ ಹೆಚ್ಚುತ್ತಿದೆ. ಅಮ್ಮುಂಜೆ ಅಶ್ರಫ್ ಹತ್ಯೆ ಖಂಡನೀಯ, ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳಲು ಸನ್ಮಾನ್ಯ ಮುಖ್ಯಮಂತ್ರಿ ಹಾಗೂ ಗೃಹ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ತಿಳಿಸಿದ್ದಾರೆ.
ದಿನೇ ದಿನೇ ನಮ್ಮ ಜಿಲ್ಲೆಯಲ್ಲಿ ಜಾತಿ, ಧರ್ಮ ಮತಭೇದದ ಹೆಸರಿನಲ್ಲಿ ವಿವಿಧ ಧರ್ಮದ ಅಮಾಯಕ ಯುವಕರು ದುಷ್ಕರ್ಮಿಗಳಿಂದ ಹತ್ಯೆ ಆಗುತ್ತಲೇ ಇದ್ದಾರೆ. ಇಂತಹ ಅಹಿತಕರ ಘಟನೆಗಳಿಂದ ಜಿಲ್ಲೆಯ ಶಾಂತಿ ಪ್ರಿಯ ನಾಗರಿಕರಿಗೆ ತೊಂದರೆಯಾಗಿದೆ. ಹಲವು ಸಮುದಾಯದ ಯುವಕರು ಇಂತಹ ದುಷ್ಕೃತ್ಯಗಳಿಗೆ ಬಲಿ ಆಗುತ್ತಲೇ ಇದ್ದಾರೆ. ಹಿಂದೂ ಮುಸ್ಲಿಂ ಕ್ರೈಸ್ತರು ಎಂಬ ಭೇದ ಭಾವವಿಲ್ಲದೆ ಜಾತ್ಯತೀತವಾಗಿ ಜೀವನ ಸಾಗಿಸುತ್ತಿದ್ದ ಜಿಲ್ಲೆಗೆ ದುಷ್ಟ ಶಕ್ತಿಗಳಿಂದ ಕೆಟ್ಟ ಹೆಸರು ಬಂದಿರುವುದು ಬೇಸರದ ವಿಷಯ ಎಂದು ಬಾವ ಖೇದ ವ್ಯಕ್ತಪಡಿಸಿದ್ದಾರೆ.
ಹಬ್ಬ ಹರಿದಿನಗಳಲ್ಲಿ ಅಮಾಯಕರ ಹತ್ಯೆ ಜಾಸ್ತಿಯಾಗುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಮಾತನಾಡಿ ದುಷ್ಕರ್ಮಿಗಳನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿ ನಮ್ಮ ಜಿಲ್ಲೆಗೆ ವಿಶೇಷವಾಗಿ ರ್ಯಾಪಿಡ್ ಆ್ಯಕ್ಶನ್ ಫೋರ್ಸ್ (ಆರ್‌ಎಎಫ್) ನೇಮಿಸಲು ಸೂಚಿಸಲಾಗಿದೆ.
ಈ ಪವಿತ್ರ ರಮಝಾನ್ ತಿಂಗಳಲ್ಲಿ ಯಾವುದೇ ರೀತಿಯ ತೊಂದರೆಗೆ ಯಾರು ಕೂಡ ಆಸ್ಪದ ನೀಡದೆ ನಾವೆಲ್ಲರೂ ಭಾರತೀಯರು ಶಾಂತಿ ಪ್ರಿಯರು ಎಲ್ಲರು ಶಾಂತಿ ಕಾಪಾಡಬೇಕೆಂದು ಪವಿತ್ರ ಉಮ್ರಾ ಯಾತ್ರೆಯಲ್ಲಿರುವ ಶಾಸಕ ಮೊಯ್ದಿನ್ ಬಾವ ತಮ್ಮ ಸ್ವಕ್ಷೇತ್ರದ ಜನತೆ ಹಾಗೂ ದ.ಕ. ಜಿಲ್ಲಾ ಸಮಸ್ತ ಬಂಧುಗಳಲ್ಲಿ ಮನವಿ ಮಾಡಿದ್ದಾರೆ.