ಇರಾಕ್: 50 ಲಕ್ಷ ಮಕ್ಕಳಿಗೆ ತುರ್ತು ನೆರವಿನ ಅಗತ್ಯ; ಯನಿಸೆಫ್

Update: 2017-06-22 14:12 GMT

ಬಗ್ದಾದ್, ಜೂ. 22: ಇರಾಕ್‌ನಲ್ಲಿ 50 ಲಕ್ಷಕ್ಕಿಂತಲೂ ಅಧಿಕ ಮಕ್ಕಳು ತುರ್ತು ನೆರವಿನ ಅಗತ್ಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ಗುರುವಾರ ಹೇಳಿದೆ ಹಾಗೂ ಐಸಿಸ್ ವಿರುದ್ಧದ ಯುದ್ಧ ಆಧುನಿಕ ಇತಿಹಾಸದಲ್ಲಿಯೇ ‘ಅತ್ಯಂತ ಅಮಾನುಷ’ವಾಗಿದೆ ಎಂದು ಬಣ್ಣಿಸಿದೆ.

‘‘ಇರಾಕ್‌ನಾದ್ಯಂತ ಮಕ್ಕಳು ಪ್ರತಿ ನಿತ್ಯ ಅತ್ಯಂತ ಭಯಾನಕ ಮತ್ತು ಅನೂಹ್ಯ ಹಿಂಸೆಯನ್ನು ನೋಡುತ್ತಿದ್ದಾರೆ’’ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯನಿಸೆಫ್) ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಆಧುನಿಕ ಇತಿಹಾಸದ ಅತ್ಯಂತ ಅಮಾನುಷ ಯುದ್ಧಗಳಲ್ಲಿ ಒಂದಾದ ಇರಾಕ್ ಯುದ್ಧದಲ್ಲಿ ಮಕ್ಕಳನ್ನು ಕೊಲ್ಲಲಾಗಿದೆ, ಗಾಯಗೊಳಿಸಲಾಗಿದೆ, ಅಪಹರಿಸಲಾಗಿದೆ ಹಾಗೂ ಇತರರನ್ನು ಗುಂಡು ಹಾರಿಸಿ ಕೊಲ್ಲುವಂತೆ ಬಲವಂತಪಡಿಸಲಾಗಿದೆ’’ ಎಂದಿದೆ.

ಇರಾಕ್‌ನ ಯುದ್ಧಪೀಡಿತ ನಗರ ಮೊಸುಲ್‌ನಲ್ಲಿ, ಜನರನ್ನು ಶಿಕ್ಷಿಸಲು ಮತ್ತು ಅವರು ಅಲ್ಲಿಂದ ಓಡಿಹೋಗುವುದನ್ನು ತಡೆಯಲು ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕರು ಮಕ್ಕಳನ್ನು ಉದ್ದೇಶಪೂರ್ವಕವಾಗಿ ಕೊಲ್ಲುತ್ತಿದ್ದಾರೆ ಎಂದು ಯುನಿಸೆಫ್ ಹೇಳಿದೆ.

 ಮೊಸುಲ್‌ನಲ್ಲಿ ಈಗಲೂ ಭಯೋತ್ಪಾದಕರ ನಿಯಂತ್ರಣದಲ್ಲಿರುವ ಕೊನೆಯ ಜಿಲ್ಲೆ ಓಲ್ಡ್ ಸಿಟಿಯ ಮಧ್ಯಭಾಗದಲ್ಲಿ ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕ ನಾಗರಿಕರು ಸಿಕ್ಕಿಹಾಕಿಕೊಂಡಿದ್ದಾರೆ ಹಾಗೂ ಅವರಲ್ಲಿ ಅರ್ಧದಷ್ಟು ಮಂದಿ ಮಕ್ಕಳು ಎಂಬುದಾಗಿ ಅಂತಾರಾಷ್ಟ್ರೀಯ ಸಂಘಟನೆಗಳು ಅಂದಾಜಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News