ಸಾಲಮನ್ನಾ ಇಂದು ಫ್ಯಾಶನ್ ಆಗಿದೆ: ವೆಂಕಯ್ಯ ನಾಯ್ಡು
ಹೊಸದಿಲ್ಲಿ, ಜೂ.22: ಸಾಲ ಮನ್ನಾ ಎಂಬುದು ಇಂದು ಫ್ಯಾಶನ್ ಆಗಿದ್ದು, ತೀವ್ರ ಸಂಕಷ್ಟದ ಸ್ಥಿತಿಯಲ್ಲಿ ಮಾತ್ರ ಸಾಲಮನ್ನಾ ಮಾಡಬೇಕು. ಆದರೆ ಇದು ಅಂತಿಮ ಪರಿಹಾರವಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ರೈತರಿಗೆ ಹಣದ ಅವಶ್ಯಕತೆ ಇದ್ದರೆ, ಬ್ಯಾಂಕ್‌ನಿಂದ ಸಾಲ ಕೊಡಿಸಲಾಗುವುದು. ರೈತರ ಸಮಸ್ಯೆಗಳಿಗೆ ಸಾಲ ಮನ್ನಾ ಅಂತಿಮ ಪರಿಹಾರವಲ್ಲ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾಗ ಮಾತ್ರ ಸಾಲ ಮನ್ನಾ ಮಾಡಬೇಕು ಎಂದು ಮುಂಬೈಯಲ್ಲಿ ನಡೆದ ನಗರಸಭೆಯ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.
ಕೇಂದ್ರ ರೈತರ ಯಾವುದೇ ಸಾಲ ಮನ್ನಾ ಮಾಡುವುದಿಲ್ಲ ಹಾಗೂ ಕೇಂದ್ರ ಹಣಕಾಸು ಸಚಿವಾಲಯ ತನ್ನ ಗುರಿಗೆ ಬದ್ಧವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ ಬಳಿಕ ನಾಯ್ಡು ಈ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ಬುಧವಾರ ರೈತರು ಸಹಾಕಾರಿ ಬ್ಯಾಂಕ್‌ಗಳಲ್ಲಿ ಮಾಡಿದ ಬೆಳೆ ಸಾಲದಲ್ಲಿ 50 ಸಾವಿರದವರೆಗೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ.
ಬುಧವಾರ ಕರ್ನಾಟಕ ಸರಕಾರ ಸಹಕಾರಿ ಬ್ಯಾಂಕ್ ಗಳಲ್ಲಿನ 50 ಸಾವಿರ ರೂ.ವರೆಗಿನ ರೈತರ ಸಾಲಮನ್ನಾ ಮಾಡಿ ಆದೇಶ ಹೊರಡಿಸಿತ್ತು. ಪ್ರತಿಯೊಬ್ಬ ರೈತನ 50 ಸಾವಿರ ರೂ. ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ಇದರಿಂದ ಸುಮಾರು 8,165 ಕೋಟಿ ರೂ. ರಾಜ್ಯ ಸರಕಾರಕ್ಕೆ ಹೊರೆಯಾಗಲಿದೆ ಎಂದಿದ್ದರು.
ಸೋಮವಾರ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರೈತರ ಸಾಲಮನ್ನಾ ಘೋಷಿಸಿದ್ದರು. ಇದರಿಂದಾಗಿ ಸುಮಾರು 10.25 ಲಕ್ಷ ರೈತರು ಪ್ರಯೋಜನ ಪಡೆಯಲಿದ್ದಾರೆ ಎಂದವರು ಹೇಳಿದ್ದರು.
ವಿಪಕ್ಷಗಳಿಂದ ತೀವ್ರ ತರಾಟೆ: ವೆಂಕಯ್ಯ ನಾಯ್ಡು ಅವರ ಹೇಳಿಕೆಯನ್ನು ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಹಾಗೂ ವಿಪಕ್ಷಗಳು ತೀವ್ರವಾಗಿ ಟೀಕಿಸಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರದ ಮಿತ್ರ ಪಕ್ಷವಾಗಿರುವ ಶಿವಸೇನೆ, ವೆಂಕಯ್ಯ ನಾಯ್ಡು ಅವರ ಹೇಳಿಕೆ ಅವಮಾನಕರ ಹಾಗೂ ದುರದೃಷ್ಟಕರ ಎಂದಿದೆ. ವೆಂಕಯ್ಯ ನಾಯ್ಡು ಅವರ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು, ವೆಂಕಯ್ಯ ನಾಯ್ಡು ರೈತ ಸಮುದಾಯವನ್ನು ಅವಮಾನಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ 30 ಸಾವಿರದಿಂದ 40 ಸಾವಿರ ರೈತರು ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಳೆ ನಾಯ್ಡು ಅವರು ರೈತರ ಆತ್ಮಹತ್ಯೆ ಕೂಡ ಒಂದು ಫ್ಯಾಶನ್ ಎಂದು ಹೇಳಬಹುದು ಎಂದಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ಹೊಸದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ , ಶ್ರೀಮಂತರ ಸಾಲ ಮನ್ನಾ ಮಾಡಿದರೆ ನಿಮಗೆ ಫ್ಯಾಶನ್ ಆಗಿ ಕಾಣುವುದಿಲ್ಲ. ಆದರೆ, ಬಡವರ ಸಾಲ ಮನ್ನಾ ಮಾಡಿದರೆ ಮಾತ್ರ ಫ್ಯಾಶನ್ ಎಂದು ಟೀಕಿಸಿದ್ದಾರೆ.