ಬಾಲ್ಯ ವಿವಾಹ ತಡೆಗೆ ಎಲ್ಲರ ಸಹಕಾರ ಅಗತ್ಯ: ನ್ಯಾ. ಲತಾ

Update: 2017-06-22 14:49 GMT

ಉಡುಪಿ, ಜೂ. 22: ಸಾಮಾಜಿಕ ಕೆಡುಕು ಎಂದೇ ಬಿಂಬಿತವಾಗಿರುವ ಬಾಲ್ಯ ವಿವಾಹದಂತಹ ಪಿಡುಗಿನ ನಿವಾರಣೆಗೆ ಎಲ್ಲರ ಸಹಕಾರ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಹೇಳಿದ್ದಾರೆ.

ಮಲ್ಪೆಯ ಗಾಂಧಿ ಶತಾಬ್ಧಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಹಿಳಾ ಮತುತಿ ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಬುಧವಾರ ಆಯೋಜಿಸಲಾದ ಬಾಲ್ಯ ವಿವಾಹ ನಿಷೇಧ, ಶಾಲೆ ಕಡೆ ನನ್ನ ನಡೆ, ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ ಮತ್ತು ಕರ್ನಾಟಕ ಸಂತ್ರಸ್ತರ ಪರಿಹಾರ ಯೋಜನೆ-2011 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಾಲ್ಯ ವಿವಾಹ ನಿಷೇಧ, ಪೊಲೀಸ್ ದೂರು ಪ್ರಾಧಿಕಾರ ಹಾಗೂ ಸಂತ್ರಸ್ತರ ಪರಿಹಾರ ಇವುಗಳ ಕುರಿತಂತೆ ಸವಿವರ ಮಾಹಿತಿ ನೀಡಿದ ಅವರು, ಬಾಲ್ಯ ವಿವಾಹದಿಂದ ಆಗುವ ಸಾಮಾಜಿಕ ದುಷ್ಪರಿಣಾಮಗಳು, ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸುವಲ್ಲಿ ನಿರಾಕರಣೆ ಅಥವಾ ನಿರ್ಲಕ್ಷ ತೋರಿದರೆ ಜನರಿಗಾಗಿ ಇರುವ ಪೊಲೀಸ್ ದೂರು ಪ್ರಾಧಿಕಾರದ ಬಗ್ಗೆ ಹಾಗೂ ವಿವಿಧ ಕಾರಣಗಳಿಂದ ಸಂತ್ರಸ್ತರಾಗುವವರಿಗೆ ನ್ಯಾಯಾಂಗ ಇಲಾಖೆ ನೀಡುವ ಸಂತ್ರಸ್ತ ಪರಿಹಾರ ನಿಧಿಯ ಬಗ್ಗೆ ಕಾರ್ಯಕ್ರಮದಲ್ಲಿ ವಿವರಣೆ ನೀಡಿದರು.

ಸಂತ್ರಸ್ತ ಪರಿಹಾರ ನಿಧಿಯಡಿ ಕುಟುಂಬಕ್ಕೆ ಆಧಾರ ಸ್ತಂಭವಾಗಿರುವವರು ಮೃತಪಟ್ಟರೆ, ಲೈಂಗಿಕ ದೌರ್ಜನ್ಯ, ಆ್ಯಸಿಡ್ ದಾಳಿಗೆ ತುತ್ತಾದವರು ಹಾಗೂ ಇನ್ನಿತರ ದೌರ್ಜನ್ಯಕ್ಕೆ ತುತ್ತಾದವರಿಗೆ ಪರಿಹಾರ ನೀಡುವ ಸೌಲಭ್ಯವಿದೆ ಎಂದು ಲತಾ ಅವರು ವಿವರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯೆ ಡಾ. ವನಿತಾ ತೊರವಿ ಮಾತನಾಡಿ, ಬಾಲ್ಯ ವಿವಾಹ ತಡೆಗೆ ಶಾಲಾ ಮಕ್ಕಳ ಸಹಕಾರ ಅತ್ಯಗತ್ಯ. ಮಕ್ಕಳು ತಮ್ಮ ಪಕ್ಕದಲ್ಲಿ ಕುಳಿತುಕೊಳ್ಳುವ ಗೆಳತಿಯರ ಬಗ್ಗೆ ಮಾಹಿತಿ ನೀಡುವುದರಿಂದ ಬಾಲ್ಯ ವಿವಾಹ ಪತ್ತೆ ಸಾಧ್ಯ. ಮಕ್ಕಳು ತಮ್ಮ ಶಿಕ್ಷಕಿಯರು ಅಥವಾ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡುವುದರಿಂದ ಶಾಲೆ ಬಿಟ್ಟ ಮಕ್ಕಳ ಪರಿಸ್ಥಿತಿ ಅರಿವಾಗುತ್ತದೆ. ಜಿಲ್ಲೆಯಲ್ಲಿ ವಲಸೆ ಮಕ್ಕಳ ಸಂಬಂಧ ಇಂತಹ ಸವಾಲುಗಳು ಉದ್ಭವಿಸಿದ್ದು, ಈ ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿ ಅಗತ್ಯವಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲೀಸ್ ಮಾತನಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಮಕ್ಕಳು, ಸ್ತ್ರೀ ಶಕ್ತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಒಂದು ಹೆಜ್ಜೆ ಮುಂದೆ ಹೋಗಿ ಕರ್ತವ್ಯ ನಿರ್ವಹಿಸಿ, ಸಾಮಾಜಿಕ ಪಿಡುಗು ನಿವಾರಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವಿಶ್ವಾಸ್, ಸಮಾಜ ಕಲ್ಯಾಣ ಇಲಾಖೆಯ ಭಾಸ್ಕರ್ ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ನಾಡಕರ್ಣಿ ಸ್ವಾಗತಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ವಿಮಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News