ಕೋಮುಪ್ರಚೋದಕ ಕೃತ್ಯಗಳಿಗೆ ಸಚಿವರ ಸಹಕಾರ: ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ-ಪುತ್ತಿಲ ಆರೋಪ

Update: 2017-06-22 15:03 GMT

ಪುತ್ತೂರು, ಜೂ. 22: ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕಾಂಗ್ರೆಸ್‌ನಲ್ಲಿದ್ದ ಅಲ್ಪಸಂಖ್ಯಾತ ಸಮುದಾಯದ ಮಂದಿ ಎಸ್‌ಡಿಪಿಐಗೆ ವಲಸೆ ಹೋಗುತ್ತಿರುವುದನ್ನು ತಡೆಯುವ ಪ್ರಯತ್ನವಾಗಿ ಕೋಮು ಪ್ರಚೋದಕ ಕೃತ್ಯಗಳಿಗೆ ಮತ್ತು ಕೃತ್ಯ ನಡೆಸುವವರಿಗೆ ಸಹಕಾರ ನೀಡುತ್ತಿದ್ದಾರೆ. ಹಿಂದೂ ಜಾಗರಣಾ ವೇದಿಕೆ ಜೂ.24ರಂದು ಬಂಟ್ವಾಳದಲ್ಲಿ ನಡೆಸಲುದ್ದೇಶಿಸಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿಯೇ ನಿಷೇಧಾಜ್ಞೆಯನ್ನು ಮುಂದುವರಿಸುವ ಕೆಲಸ ಮಾಡಲಾಗಿದೆ ಎಂದು ಸಂಘಪರಿವಾರದ ಮುಖಂಡ ಅರುಣ್‌ ಕುಮಾರ್ ಪುತ್ತಿಲ ಆರೋಪಿಸಿದರು.

ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಬರುವ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ಕೋಮುಗಲಭೆಯ ಸೃಷ್ಠಿಸುವ ಮೂಲಕ ರಾಜಕೀಯ ಲಾಭಗಳಿಸುವ ರಾಜಕಾರಣ ಮಾಡಲಾಗುತ್ತಿದೆ. ಓಲೈಕೆ ರಾಜಕಾರಣದ ಭಾಗವಾಗಿಯೇ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವರ ಮೇಲೆ ಕೇಸು ದಾಖಲಿಸಿಕೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹೇರುವ ಕೆಲಸವನ್ನು ಸಚಿವ ರಮಾನಾಥ ರೈ ಅವರು ಮಾಡಿದ್ದಾರೆ.

ಬುಧವಾರ ನಡೆದ ಎಸ್‌ಡಿಪಿಐ ಮುಖಂಡ ಅಶ್ರಫ್ ಕೊಲೆ ಪ್ರಕರಣವನ್ನು ಸಂಘ ಪರಿವಾರದವರೇ ಮಾಡಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದು, ಈ ಇಬ್ಬರು ನಾಯಕರು ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಲ್ಲಡ್ಕದಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ಕೊಲೆ ನಡೆಸುವ ಪ್ರಯತ್ನ ನಡೆದಿದೆ. ಕನ್ಯಾನ ಕರೋಪಾಡಿಯಲ್ಲಿ ಮಾಲತಿ ಎಂಬ ಮಹಿಳೆಯೊಬ್ಬರ ಮೇಲೆ ಲೈಂಕಿಕ ದೌರ್ಜನ್ಯ ನಡೆಸಿ ಹಲ್ಲೆ ನಡೆಸಲಾಗಿದೆ. ಹಿಂದೂಗಳ ಮೇಲೆ ಹಲ್ಲೆ -ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಕಣ್ಣೂರಿನಲ್ಲಿ ಇಂದು ಹಿಂದೂ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ನಡೆದಿದೆ. ಆದರೆ ಜಿಲ್ಲೆಯ ಈ ಸಚಿವರಿಬ್ಬರು ಆ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ಸಂಘ ಪರಿವಾರದ ವಿರುದ್ದವೇ ಹೇಳಿಕೆ ನೀಡುತ್ತಿದ್ದು, ಇದನ್ನು ನಾವು ಖಂಡಿಸುತ್ತೇವೆ. ಅಶ್ರಫ್ ಕೊಲೆ ಘಟನೆ ಮತ್ತು ಶವಯಾತ್ರೆಯ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣವನ್ನೂ ಖಂಡಿಸುತ್ತೇವೆ ಎಂದು ಅವರು ತಿಳಿಸಿದರು.

ನಿಷೇಧಾಜ್ಞೆ ಮುಗಿದ ಬಳಿಕ ಪುತ್ತೂರಿನಲ್ಲಿಯೂ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದೌರ್ಜನ್ಯದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಹಿಂದೂ ಜಾಗರಣಾ ವೇದಿಕೆಯ ಮುಖಂಡ ಜಗದೀಶ್ ಕಾರಂತ ಅವರು ದಿಕ್ಸೂಚಿ ಭಾಷಣ ಮಾಡುವರು ಎಂದು ಅವರು ತಿಳಿಸಿದರು. ಪುತ್ತೂರು ,ಸುಳ್ಯ ಭಾಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿದ್ದರೂ ಇಲ್ಲಿಯೂ ನಿಷೇಧಾಜ್ಞೆ ಜಾರಿಗೊಳಿಸಿರುವುದು ಗೊಂದಲ ಸೃಷ್ಠಿಸುವ ಭಾಗವಾಗಿದೆ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಪುತ್ತೂರು ತಾಲೂಕು ಸಂಚಾಲಕ ವಕೀಲ ಚಿನ್ಮಯ ರೈ, ಪುತ್ತೂರು ನಗರ ಸಮಿತಿಯ ಸಂಚಾಲಕ ಶಶಿಕಾಂತ್ ಕೋರ್ಟುರೋಡ್, ತಾಲೂಕು ಸಹ ಸಂಚಾಲಕ ರಜನೀಶ್ ಪೆರ್ಲಂಪಾಡಿ, ನಗರ ಸಮಿತಿಯ ಕಾರ್ಯದರ್ಶಿ ಗೀತೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News