ದಯಾಭಿಕ್ಷೆ ಕೋರಿ ಸೇನಾ ಮುಖ್ಯಸ್ಥರಿಗೆ ಕುಲಭೂಷಣ್ ಜಾಧವ್‌ರಿಂದ ಅರ್ಜಿ ಸಲ್ಲಿಕೆ: ಪಾಕ್ ಸೇನೆ

Update: 2017-06-22 15:41 GMT

ಹೊಸದಿಲ್ಲಿ,ಜೂ.22: ಗಲ್ಲುಗಂಬವನ್ನೇರಲು ಕಾಯುತ್ತಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರು ದಯಾಭಿಕ್ಷೆಯನ್ನು ಕೋರಿ ತನ್ನ ಮುಖ್ಯಸ್ಥ ಜನರಲ್ ಕಮರ್ ಜಾವೇದ ಬಾಜ್ವಾ ಅವರಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಪಾಕಿಸ್ತಾನಿ ಸೇನೆಯು ಗುರುವಾರ ಪ್ರಕಟಿಸಿದೆ.

ಪಾಕಿಸ್ತಾನದಲ್ಲಿ ಬೇಹುಗಾರಿಕೆ, ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತನ್ನ ಪಾತ್ರವನ್ನು ಜಾಧವ್ ಒಪ್ಪಿಕೊಂಡಿದ್ದಾರೆ ಮತ್ತು ತನ್ನ ಕೃತ್ಯಗಳಿಂದಾಗಿ ಹಲವು ಅಮಾಯಕ ಜೀವಗಳ ಬಲಿ ಹಾಗೂ ಆಸ್ತಿಗಳಿಗೆ ವ್ಯಾಪಕ ಹಾನಿಗಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ತನ್ನ ಕೃತ್ಯಗಳಿಗಾಗಿ ತನ್ನನ್ನು ಕ್ಷಮಿಸುವಂತೆ ಮತ್ತು ಅನುಕಂಪದ ಆಧಾರದಲ್ಲಿ ತನಗೆ ಜೀವದಾನ ಮಾಡುವಂತೆ ಜಾಧವ್ ಕೋರಿದ್ದಾರೆ ಎಂದೂ ಹೇಳಿಕೆಯು ತಿಳಿಸಿದೆ.

ಜಾಧವ್ ಈ ಹಿಂದೆ ಸೇನಾ ಮೇಲ್ಮನವಿ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದು, ಅದು ತಿರಸ್ಕೃತಗೊಂಡಿದೆ.
ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪಪದಲ್ಲಿ ಸೇನಾ ನ್ಯಾಯಾಲಯವು ಈ ವರ್ಷದ ಎಪ್ರಿಲ್‌ನಲ್ಲಿ ಜಾಧವ್‌ಗೆ ಮರಣ ದಂಡನೆಯನ್ನು ವಿಧಿಸಿದ್ದು, ಭಾರತದ ಮೇಲ್ಮನವಿಯನ್ನು ಪುರಸ್ಕರಿಸಿರುವ ಅಂತರರಾಷ್ಟ್ರೀಯ ನ್ಯಾಯಾಲಯವು ಮೇ ತಿಂಗಳಿನಲ್ಲಿ ಮರಣ ದಂಡನೆಗೆ ತಡೆಯಾಜ್ಞೆ ನೀಡಿದೆ.

ಕಾನೂನಿನಂತೆ ಜಾಧವ್ ದಯಾಭಿಕ್ಷೆಯನ್ನು ಕೋರಿ ಸೇನಾ ಮುಖ್ಯಸ್ಥರಿಗೆ ಮೇಲ್ಮನವಿಯನ್ನು ಸಲ್ಲಿಸಬಹುದು ಮತ್ತು ಅದು ತಿರಸ್ಕರಿಸಲ್ಪಟ್ಟರೆ ಪಾಕಿಸ್ತಾನದ ಅಧ್ಯಕ್ಷರಿಗೆ ಅರ್ಜಿಯನ್ನು ಸಲ್ಲಿಸಬಹುದು.

ಸೇನೆಯು ‘ಎರಡನೇ ತಪ್ಪೊಪ್ಪಿಗೆ ’ವೀಡಿಯೊವನ್ನು ಸಹ ಬಿಡುಗಡೆಗೊಳಿಸಿದ್ದು, ಜಾಧವ್ ತನ್ನ ಕೃತ್ಯಗಳನ್ನು ಒಪ್ಪಿಕೊಂಡಿರುವ ದೃಶ್ಯಗಳನ್ನು ತೋರಿಸಲಾಗಿದೆ.
ಭಾರತವು ಪಾಕಿಸ್ತಾನದ ವಿರುದ್ಧ ನಡೆಸುತ್ತಿರುವ ಕಾರಸ್ತಾನ ಜಗತ್ತಿಗೆ ಗೊತ್ತಾಗಬೇಕು ಎಂಬ ಕಾರಣದಿಂದ ತಾನು ಈ ವೀಡಿಯೊವನ್ನು ಬಿಡುಗಡೆಗೊಳಿಸಿರುವುದಾಗಿ ಸೇನೆಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News