ಕಾಶ್ಮೀರ: ಎಲ್‌ಒಸಿ ಬಳಿ ಪಾಕ್ ದಾಳಿ; ಭಾರತೀಯ ಯೋಧರಿಬ್ಬರು ಹುತಾತ್ಮ

Update: 2017-06-22 15:55 GMT

  ಹೊಸದಿಲ್ಲಿ, ಜೂ.22: ಜಮ್ಮುಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿನಿಯಂತ್ರಣ ರೇಖೆಯ ಬಳಿಕ ಭಾರತೀಯ ಸೇನಾಪಡೆಯ ಗಸ್ತು ತಂಡದ ಮೇಲೆ ಪಾಕಿಸ್ತಾನದ ಗಡಿ ಕಾರ್ಯಪಡೆ (ಬಿಎಟಿ) ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಮಧ್ಯೆ ಗಡಿಯೊಳಗೆ ನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಭಾರತೀಯ ಪಡೆಗಳು ಹತ್ಯೆಗೈದಿರುವುದಾಗಿ ಮೂಲಗಳು ತಿಳಿಸಿವೆ.


   ‘‘ಭಾರತದ ಗಡಿಯೊಳಗೆ ಅತಿಕ್ರಮಿಸುವ ಪಾಕ್ ಪಡೆಗಳ ಪ್ರಯತ್ನವನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ. ಪಾಕ್ ಪಡೆಗಳು ಈ ಪ್ರದೇಶದಲ್ಲಿ ಒಳನುಸುಳಲು ನಡೆಸಿದ ಮೂರನೆ ಪ್ರಯತ್ನ ಇದಾಗಿದೆ’’ ಎಂದು ಸೇನಾವಕ್ತಾರರೊಬ್ಬರು ಜಮ್ಮವಿನಲ್ಲಿ ತಿಳಿಸಿದ್ದಾರೆ.ಗಡಿನಿಯಂತ್ರಣ ರೇಖೆಯ ಭಾರತದ ಗಡಿಯೊಳಗೆ 600 ಮೀಟರ್ ಒಳಗೆ ಪಾಕಿಸ್ತಾನದ ಬ್ಯಾಟ್ ತಂಡವು ಒಳನುಸುಳಿದ್ದಾಗಿ ಅವರು ಹೇಳಿದ್ದಾರೆ.


   ಪಾಕಿಸ್ತಾನಿ ಸೇನೆಯ ವಿಶೇಷ ಪಡೆಗಳು ಹಾಗೂ ಕೆಲವು ಉಗ್ರರನ್ನು ಒಳಗೊಂಡ ಪಾಕಿಸ್ತಾನದ ಗಡಿ ಕಾರ್ಯಪಡೆ ತಂಡ (ಬ್ಯಾಟ್)ವು ಇಂದು ಮಧ್ಯಾಹ್ನ 2 :00 ಗಂಟೆಗೆ ಈ ದಾಳಿಯನ್ನು ನಡೆಸಿವೆಯೆಂದು ಸೇನಾ ಮೂಲಗಳು ತಿಳಿಸಿವೆ.
ಪೂಂಚ್ ಜಿಲ್ಲೆಯ ಚಕನ್ ದ ಭಾಗ್ ವಲಯದಲ್ಲಿ ಪಾಕ್ ಸೇನೆಯು ಭಾರತೀಯ ಸೇನಾನೆಲೆಗಳ ಮೇಲೆ ಬಾರೀ ಶೆಲ್ ದಾಳಿ ಹಾಗೂ ಗುಂಡೆಸೆತವನ್ನು ಆರಂಭಿಸಿದ ಬಳಿಕ ಉಭಯ ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ಭುಗಿಲೆದ್ದಿತೆಂದು ಅವರು ಹೇಳಿದ್ದಾರೆ.


   ಪೂಂಚ್ ಸಮೀಪದ ಎಲ್‌ಓಸಿಯಲ್ಲಿ ಪಾಕಿಸ್ತಾನಿ ಸೇನೆಯು ಭಾರತೀಯ ಸೇನಾ ನೆಲೆಗಳ ಮೇಲೆ ಅಪ್ರಚೋದಿತ ಗುಂಡೆಸೆತ ಹಾಗೂ ಶೆಲ್ ದಾಳಿಯಲ್ಲಿ ತೊಡಗಿದ್ದು, ಅದಕ್ಕೆ ಭಾರತೀಯ ಯೋಧರು ಪ್ರತಿದಾಳಿ ನಡೆಸುವ ಮೂಲಕ ಸೂಕ್ತವಾದ ಪ್ರತ್ಯುತ್ತರ ನೀಡಿದ್ದಾರೆಂದು ರಕ್ಷಣ ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ಮೇ 1ರಂದು ಬ್ಯಾಟ್‌ಪಡೆಗಳು ಜಮ್ಮುಕಾಶ್ಮೀರದ ಎಲ್‌ಓಸಿ ಗಡಿಯೊಳಗೆ ನುಸುಳಿ ಓರ್ವ ಬಿಎಸ್‌ಎಫ್ ಯೋಧ ಹಾಗೂ ಇನ್ನೋರ್ವ ಭಾರತೀಯ ಯೋಧನನ್ನು ಹತ್ಯೆಗೈದಿದ್ದವು ಹಾಗೂ ಅವರ ಮೃತದೇಹಗಳು ವಿಚ್ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News