ಎಸ್ಪಿಗೆ ನಿರ್ದೇಶನ: ಸಚಿವರ ಕ್ರಮ ಸರಿಯಾಗಿದೆ; ಐವನ್‌

Update: 2017-06-22 16:01 GMT

ಮಂಗಳೂರು, ಜೂ. 22: ಕಲ್ಲಡ್ಕ ಘರ್ಷಣೆಗೆ ಸಂಬಂಧಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ನೀಡಿರುವ ನಿರ್ದೇಶನದಲ್ಲಿ ತಪ್ಪಿಲ್ಲ ಎಂದು ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರದಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡುವಲ್ಲಿ ಸಚಿವರು ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿ ಎಸ್ಪಿಗೆ ಸೂಚನೆ ನೀಡಿರುವುದು ಸರಿಯಾಗಿದೆ ಎಂದರು.

ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಧಾರ್ಮಿಕ ಮುಖಂಡರ ಜವಾಬ್ದಾರಿಯೂ ಹೆಚ್ಚಿದೆ. ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆದರೆ, ಧಾರ್ಮಿಕ ಮುಖಂಡರು ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಬೆಂಜನಪದವಿನಲ್ಲಿ ಅಶ್ರಫ್ ಎಂಬವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿರುವುದನ್ನು ಖಂಡಿಸಿದ ಅವರು, ಜನರು ವದಂತಿಗಳಿಗೆ ಕಿವಿಗೊಡದೆ ಶಾಂತಿ, ಸೌಹಾರ್ದನವನ್ನು ಕಾಪಾಡಬೇಕೆಂದು ಮನವಿ ಮಾಡಿದರು.

ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಐವನ್ ಡಿಸೋಜಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ರೈತರ ಸಾಲ ಮನ್ನಾ ಮಾಡಿರುವುದಕ್ಕೆ ಬಿಜೆಪಿಗರು ‘ತಮ್ಮ ಹೋರಾಟಕ್ಕೆ ಸಂದ ಜಯ’ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ರಾಜ್ಯದ ಸಂಸದರಿಗೆ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ರಾಜ್ಯ ಸರಕಾರ ಸಹಕಾರ ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾ ಮಾಡಿದಂತೆ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಲಿ ಎಂದರು.

ಬರಗಾಲಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪ ಮಾಡಿದ ಐವನ್, ಕಳೆದ ಬಾರಿ ರಾಜ್ಯ ಸರಕಾರ ಬೇಡಿಕೆ ಸಲ್ಲಿಸಿದಂತೆ ಕೇಂದ್ರ ಅನುದಾನವನ್ನು ಬಿಡುಗಡೆ ಮಾಡಿಲ್ಲ. ರಾಜಸ್ಥಾನವನ್ನು ಹೊರತು ಪಡಿಸಿ ಹೆಚ್ಚು ಒಣ ಭೂಮಿ ಇರುವುದು ಕರ್ನಾಟಕದಲ್ಲಿ. ಉಳಿದ ರಾಜ್ಯಗಳಿಗೆ ವಿಶೇಷ ಅನುದಾನದ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಯಾಕೆ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರತಿಭಾ ಕುಳಾಯಿ, ನಾಗವೇಣಿ, ಎಂ.ಪಿ. ಮನುರಾಜ್, ಅಮೃತ್ ಕದ್ರಿ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News