ಸ್ವಚ್ಛತೆಯ ಅರಿವಿಗಾಗಿ ಬೀದಿ ನಾಟಕ ‘ಕಸರಕ್ಕಸ’
ಉಡುಪಿ, ಜೂ.22: ಉಡುಪಿಯ ಸಾಂಸ್ಕೃತಿಕ ಸಂಘಟನೆ ರಂಗಭೂಮಿ ನಿರೂಪಿಸುವ ಸ್ವಚ್ಛತೆ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸುವ ಬೀದಿ ನಾಟಕದ ಮೂಲಕ ದೇಶದಲ್ಲಿ ಈಗ ಸ್ವಚ್ಚತೆಯಲ್ಲಿ 153ನೇ ಸ್ಥಾನದಲ್ಲಿರುವ ಉಡುಪಿ ನಗರಸಭೆಯನ್ನು ಅಗ್ರಸ್ಥಾನಕ್ಕೆ ತರುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ನಗರಸಭೆ, ರಂಗಭೂಮಿ ಉಡುಪಿ ಸಹಯೋಗದೊಂದಿಗೆ ಜನಜಾಗೃತಿಗಾಗಿ ರೂಪಿಸಿರುವ ಬೀದಿ ನಾಟಕ ‘ಕಸರಕ್ಕಸ’ದ ಪ್ರಥಮ ಪ್ರದರ್ಶನಕ್ಕೆ ನಗರದ ಬಸ್‌ನಿಲ್ದಾಣದ ಬಳಿ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಉಡುಪಿ ನಗರದಲ್ಲಿ ಸುಮಾರು 35,000 ಮನೆಗಳಿವೆ. ಪ್ರತಿ ಮನೆಯಲ್ಲೂ ಉತ್ಪತ್ತಿಯಾಗುವ ಕಸ ಅದೇ ಮನೆಯ ಜವಾಬ್ದಾರಿ ಎಂಬುದರ ಅರಿವು ಜನರಿಗೆ ಮೊದಲು ಮೂಡಬೇಕು. ಅದು ಕೇವಲ ನಗರಸಭೆಯ ಅಥವಾ ಸರಕಾರದ ಹೊಣೆಯಲ್ಲ. ಹೀಗಾಗಿ ಅವುಗಳ ನಿರ್ವಹಣೆಯಲ್ಲೂ ನಿಮಗೆ ಪಾತ್ರವಿದೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು ಎಂದು ಸಚಿವರು ನುಡಿದರು.
ಪ್ರತಿ ಮನೆಯ ಕಸದ ನಿರ್ವಹಣೆಯ ಅರಿವು ನಿಮಗೆ ಮೂಡಿದರೆ, ನಗರಸಭೆಯ ಕೆಲಸ ಸುಲಭವಾಗುತ್ತದೆ.ನಗರದ ನಾನಾ ಕಡೆಗಳಲ್ಲಿ ಈ ಬೀದಿ ನಾಟಕವನ್ನು ರಂಗಭೂಮಿ ಪ್ರದರ್ಶಿಸಲಿದ್ದು, ಜನತೆಯಲ್ಲಿ ಕಸದ ನಿರ್ವಹಣೆ ಕುರಿತಂತೆ ಜಾಗೃತಿ ಮೂಡುವ ವಿಶ್ವಾಸವಿದೆ ಎಂದು ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಪೌರಾಯುಕ್ತ ಡಿ.ಮಂಜುನಾಥಯ್ಯ, ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಮೇಟಿ ಮುದಿಯಪ್ಪ, ಪ್ರದೀಪ್ ಕುತ್ಪಾಡಿ, ನಗರಸಭೆಯ ಸ್ವಚ್ಛತಾ ರಾಯಭಾರಿ ಅವಿನಾಶ್ ಕಾಮತ್, ಯು.ದಾಮೋದರ್, ಜನಾರ್ದನ ಭಂಡಾರ್‌ಕರ್ ಮುಂತಾದವರು ಉಪಸ್ಥಿತರಿದ್ದರು. ನಗರಸಭೆಯ ಪರಿಸರ ಇಂಜಿನಿಯರ್ ರಾಘವೇಂದ್ರ ಸ್ವಾಗತಿಸಿ, ಮಂಜುನಾಥಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಬಳಿಕ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರು ರಚಿಸಿದ ‘ಕಸರಕ್ಕಸ’ ಬೀದಿ ನಾಟಕವನ್ನು ರಾಜೇಶ್ ಭಟ್ ಪಣಿಯಾಡಿ ನಿರ್ದೇಶನದಲ್ಲಿ, ರಂಗಭೂಮಿ ಗೀತಂಗಿರೀಶ್ ಸಂಗೀತ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.