ಪಾಲನಾ ಕೇಂದ್ರದಲ್ಲಿ 3 ತಿಂಗಳಿನಿಂದ ಪಿಜಿಯೋಥೆರಪಿ ಹುದ್ದೆ ಖಾಲಿ

Update: 2017-06-22 17:39 GMT

ಉಪ್ಪಿನಂಗಡಿ, ಜೂ. 22: ಎಂಡೋ ಸಂತ್ರಸ್ತರ ಹೋರಾಟ ಸಮಿತಿಯ ಆಗ್ರಹದ ಮೇರೆಗೆ ಸರ್ಕಾರ ಪುತ್ತೂರು ತಾಲ್ಲೂಕಿನ  ಕೊಯಿಲದಲ್ಲಿ ಮತ್ತು ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದಲ್ಲಿ ಪಾಲನಾ ಕೇಂದ್ರ ತೆರೆದಿದ್ದು, ಕಳೆದ ಹಲವಾರು ವರ್ಷಗಳಿಂದ ಇದು ಕಾರ್ಯಾಚರಿಸುತ್ತಿದ್ದು, ಇಲ್ಲಿ ಅಂಗವೈಕಲ್ಯತೆ ಹೊಂದಿರುವ ಸಂತ್ರಸ್ಥರಿಗಾಗಿ ಇದ್ದಂತಹ ಪಿಜಿಯೋಥೆರಪಿ ಚಿಕಿತ್ಸೆ ಕಳೆದ 3 ತಿಂಗಳಿನಿಂದ ಇಲ್ಲವಾಗಿದ್ದು, ಎಂಡೋ ಪೀಡಿತ ಸಂತ್ರಸ್ಥರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ದೂರುಗಳು ವ್ಯಕ್ತವಾಗಿದೆ.

ಕೊಯಿಲ ಮತ್ತು ಕೊಕ್ಕಡ ಕೇಂದ್ರದಲ್ಲಿ ಅಂಗವೈಕಲ್ಯತೆ ಹೊಂದಿರುವ ಸಂತ್ರಸ್ಥರಿಗಾಗಿ ಎರಡೂ ಕಡೆಯಲ್ಲಿ ಪ್ರತ್ಯೇಕವಾದ ಇಬ್ಬರು ಪಿಜಿಯೋಥೆರಪಿ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಕಳೆದ ಎಪ್ರಿಲ್ 1ರಿಂದ ಈ ಎರಡೂ ಕಡೆಯಲ್ಲಿ ಈ ಹುದ್ದೆ ಖಾಲಿ ಇದೆ ಹೇಳಲಾಗಿದ್ದು, ಇದೀಗ 3 ತಿಂಗಳಿನಿಂದ ಇಲ್ಲಿನ ಪೀಡಿತರು ಈ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ ಎಂದು ಸಂತ್ರಸ್ಥರ ಪೋಷಕರು ದೂರಿದ್ದಾರೆ.

ಪಾಲನಾ ಕೇಂದ್ರ ಆರಂಭ ಆದ ಸಮಯದಿಂದ ಪಿಜಿಯೋಥೆರಪಿ ವೈದ್ಯರೊಬ್ಬರು ಸೇವೆಯಲ್ಲಿ ತೊಡಗಿಕೊಂಡಿದ್ದರು. ಸರ್ಕಾರದ ವತಿಯಿಂದ ಕೆಲವೊಂದು ಪರಿಕರಗಳನ್ನು ನೀಡಲಾಗಿತ್ತು. ಆದರೆ ಇದಕ್ಕೆ ಬೇಕಾಗಿದ್ದ ಕೆಲವೊಂದು ಅಗತ್ಯ ಪರಿಕರಗಳ ಸಮಸ್ಯೆ ಎದುರಾಗಿತ್ತು. ಇದನ್ನು ಮನಗಂಡ ಎಂಡೋ ವಿರೋಧಿ ಹೋರಾಟ ಸಮಿತಿ ಉಪ್ಪಿನಂಗಡಿ ರೋಟರಿ ಕ್ಲಬ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ವಿಶೇಷ ವಿನ್ಯಾಸದ ಕುರ್ಚಿ ಸಹಿತ ಪರಿಕರಗಳನ್ನು ನೀಡಿತ್ತು. ಆದರೆ ಅದೆಲ್ಲವೂ ಇದೀಗ ಮೂಲೆ ಸೇರಿದೆ ಎಂದು ಹೇಳಲಾಗಿದೆ.

ಪಾಲನಾ ಕೇಂದ್ರ ಆರಂಭ ಆದಂದಿನಿಂದಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನಿರ್ವಹಣೆ ಮಾಡುತ್ತಿತ್ತು. ಆದರೆ 2017ರ ಮಾರ್ಚ್ ಬಳಿಕ ಇದರ ನಿರ್ವಹಣೆ ಬಗ್ಗೆ ಸರ್ಕಾರ ಟೆಂಡರ್ ಪ್ರಕ್ರಿಯೆ ನಡೆಸಿದ್ದು, ಇದರಲ್ಲಿ ಸೇವಾ ಭಾರತಿ ಸಂಸ್ಥೆಗೆ ಟೆಂಡರ್ ಖಾಯಂ ಆಗಿದೆ ಎಂದು ಹೇಳಲಾಗಿದ್ದು, ಹೀಗಾಗಿ 2017 ಎಪ್ರಿಲ್ 1ರಿಂದ ಇದರ ನಿರ್ವಹಣೆ ಉಸ್ತುವಾರಿಯನ್ನು ಸೇವಾ ಭಾರತಿ ಸಂಸ್ಥೆ (ರಿ.) ಮಂಗಳೂರು ನಡೆಸುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಬದಲಾವಣೆ ಬಳಿಕ ಪಿಜಿಯೋಥೆರಪಿ ಹುದ್ದೆ ಖಾಲಿ ಇದೆ ಎಂದು ಹೇಳಲಾಗಿದೆ.

ಕೇಂದ್ರದ ಉದ್ದೇಶ ವಿಫಲ ಆಗುತ್ತಿದೆ- ಫೀರ್ ಮಹಮ್ಮದ್
ಎಂಡೋ ಪೀಡಿತ ಆರೋಗ್ಯ ಸುಧಾರಣೆ ಸಲುವಾಗಿ ಸರ್ಕಾರ ಪಾಲನಾ ಕೇಂದ್ರ ತೆರೆದಿರುವಂತದ್ದು, ಇಲ್ಲಿನ ಪೀಡಿತರಿಗೆ ಅಗತ್ಯ ಬೇಕಾಗಿರುವಂತದ್ದು ಪಿಜಿಯೋಥೆರಪಿ ಆಗಿರುತ್ತದೆ, ಆದರೆ ಅದು ಇಲ್ಲದೆ ಹೋದರೆ ಕೇಂದ್ರದ ಉದ್ದೇಶ ವಿಫಲ ಆಗಲಿದೆ, ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿರುವುದಾಗಿ ದ.ಕ. ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಫೀರ್ ಮಹಮ್ಮದ್ ಸಾಹೇಬ್ ತಿಳಿಸಿದ್ದಾರೆ.

ಪಿಜಿಯೋಥೆರಪಿ ಇಲ್ಲದೆ ಕೇಂದ್ರದ ಅವಶ್ಯಕತೆ ಇಲ್ಲ-ಶ್ರೀಧರ ಗೌಡ:

ಈ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ, ಪಾಲನಾ ಕೇಂದ್ರದಲ್ಲಿ ಪಿಜಿಯೋಥೆರಪಿ ಅತೀ ಅಗತ್ಯ, ಅದು ಇಲ್ಲದೆ ಕೇಂದ್ರದ ಅವಶ್ಯಕತೆ ಇಲ್ಲ, ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಸಂಚಾಲಕ ಶ್ರೀಧರ ಗೌಡ ಪ್ರತಿಕ್ರಿಯಿಸಿದ್ದಾರೆ.

ಇಬ್ಬರು ವೈದ್ಯರ ನೇಮಕ ಆಗಿದೆ-ವ್ಯವಸ್ಥಾಪಕ
ಪಿಜಿಯೋಥೆರಪಿ ವೈದ್ಯರ ಕೊರತೆ ಬಗ್ಗೆ ಈಗಾಗಲೇ ದೂರು ಬಂದಿದೆ. ಅದರ ಸಲುವಾಗಿ ಕೊಲ ಮತ್ತು ಕೊಕ್ಕಡ ಪಾಲನಾ ಕೇಂದ್ರಗಳಿಗೆ ಇಬ್ಬರು ವೈದ್ಯರ ನೇಮಕ ಆಗಿದ್ದು, ಜುಲೈ 1ರಿಂದ ಸೇವೆ ಆರಂಭ ಆಗಲಿದೆ ಎಂದು ಪಾಲನಾ ಕೇಂದ್ರದ ವ್ಯವಸ್ಥಾಪಕ ಗೋಪಾಲ ಕೃಷ್ಣ ಭಟ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News