×
Ad

​ಕೋಮು ಸೌಹಾರ್ದ ಸ್ಥಾಪಿಸಲು ಶ್ರೀರಾಮ ರೆಡ್ಡಿ ಒತ್ತಾಯ

Update: 2017-06-23 16:40 IST

ಮಂಗಳೂರು, ಜೂ.23: ಕೆಲವು ದಿನಗಳಿಂದ ಕಲ್ಲಡ್ಕದಲ್ಲಿ ಹಿಂದುತ್ವವಾದಿ ಸಂಘಟನೆಗಳಿಂದ ಪ್ರಚೋದನೆಗೊಂಡು ಪ್ರಾರಂಭವಾದ ಕೋಮು ಸಂಘರ್ಷಗಳು, ಹಿಂದು ಮತ್ತು ಮುಸ್ಲಿಮರ ಮಧ್ಯೆ ಕಂದರ ಸೃಷ್ಟಿಸುವ ಹಾಗೂ ದ್ವೇಷ ಹುಟ್ಟಿಸುವ ಅಪಾಯ ಸೃಷ್ಟಿಸುತ್ತಿದೆ.
ಒಂದೆಡೆ ಸಂಘ ಪರಿವಾರದ ಮತ್ತು ಇನ್ನೊಂದೆಡೆ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಪರಸ್ಪರ ದ್ವೇಷ ಹಾಗೂ ಘರ್ಷಣೆಯ ವಾತಾವರಣವನ್ನು ಬೆಳೆಸುತ್ತಿವೆ. ಕೋಮು ಸೌಹಾರ್ದವನ್ನು ಬಯಸುವ ಜನತೆ ಈ ಸಂಘರ್ಷದ ವಾತಾವರಣವನ್ನು ತಣ್ಣಗೆ ಮಾಡಬೇಕಾದ ತುರ್ತು ಆವಶ್ಯಕತೆ ಇದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ಗಲಭೆ ಸಂಬಂಧವಾಗಿ ಸಚಿವ ರಮಾನಾಥ ರೈ ಉಸ್ತುವಾರಿ ಸಚಿವರ ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ನೀಡಿದ ನಿರ್ದೇಶನದಲ್ಲಿ ಕೋಮು ಸೌಹಾರ್ದ ಸಾಧಿಸುವ ಉದ್ದೇಶ ಕಂಡು ಬರುತ್ತಿದೆಯೇ ವಿನ: ಕೋಮುದ್ವೇಷವನ್ನು ಬೆಳೆಸುವ ಉದ್ದೇಶ ಕಾಣುವುದಿಲ್ಲ. ಅಲ್ಲದೆ ಅದಕ್ಕಾಗಿ ಪ್ರಯತ್ನಿಸಬೇಕಾದುದು ಉಸ್ತುವಾರಿ ಸಚಿವರ ಕರ್ತವ್ಯವೇ ಆಗಿದೆ. ಸಂಘ ಪರಿವಾರ ಮತ್ತು ಪಿಎಫ್‌ಐ ಸಚಿವ ರಮಾನಾಥ ರೈಯ ರಾಜೀನಾಮೆ ಕೇಳುತ್ತಿದೆ. ಇಬ್ಬರ ಉದ್ದೇಶವೂ ಒಂದೇ ಆಗಿದೆ. ಇಬ್ಬರ ಚಟುವಟಿಕೆಯೂ ಒಬ್ಬೊಬ್ಬರಿಗೆ ಪೂರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದುತ್ವ ಬಣದ ಡಾ. ಕಲ್ಲಡ್ಕ ಪ್ರಭಾಕರ ಭಟ್ಟರು ಹಲವಾರು ವರ್ಷಗಳಿಂದ ಕೋಮುದ್ವೇಷ ಪ್ರಚೋದಕ ಭಾಷಣಗಳನ್ನು ಬಹಿರಂಗವಾಗಿ ಮಾಡಿರುವುದು ಸಾರ್ವಜನಿಕರಿಗೆ ಗೊತ್ತಿದೆ. ರಾಜ್ಯ ಸರಕಾರವೂ ಈ ಮೊದಲೇ ಪ್ರಭಾಕರ ಭಟ್ಟರ ಬಗ್ಗೆ ಕಾನೂನು ಕ್ರಮಕೈಗೊಂಡು, ಅವರ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಬೇಕಿತ್ತು. ಈಗಲಾದರೂ ರಾಜ್ಯದ ಗೃಹ ಇಲಾಖೆ ಕೋಮು ಘರ್ಷಣೆಗೆ ಪ್ರಚೋದನೆ ನೀಡುತ್ತಿರುವ ಜಿಲ್ಲೆಯ ಹಿಂದುತ್ವ ಕೋಮುವಾದಿ ವ್ಯಕ್ತಿಗಳನ್ನೂ ಅದೇ ರೀತಿ ಪ್ರಚೋದನಕಾರಿ ಚಟುವಟಿಕೆ ನಡೆಸುತ್ತಿರುವ ಮುಸ್ಲಿಂ ಕೋಮುವಾದಿ ವ್ಯಕ್ತಿಗಳನ್ನು ನಿರ್ಬಂಧದಲ್ಲಿರಿಸಿ, ಜಿಲ್ಲೆಯ ಶಾಂತಿ ಸೌಹಾರ್ದವನ್ನು ಕಾಪಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News