ಕುದ್ರೋಳಿಯಲ್ಲಿ ವಿಧವಾ ದಿನಾಚರಣೆ: ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ
ಮಂಗಳೂರು, ಜೂ.23: ಅಂತಾರಾಷ್ಟ್ರೀಯ ವಿಧವಾ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಕುದ್ರೋಳಿ ಶ್ರೀಗೋಕರ್ಣನಾಥ ದೇವಳ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಸ್ವಉದ್ಯೋಗ ಸಂಪನ್ಮೂಲ ವ್ಯಕ್ತಿ ಹರಿಣಾ ರಾವ್ ಮಾತನಾಡಿ, ವಿಧವೆಯರು ವಿವಿಧ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸ್ವತಂತ್ರವಾಗಿ ಬದುಕು ಸಾಗಿಸಲು ಸಾಧ್ಯ ಎಂದರು.
ಕುದ್ರೋಳಿ ಶ್ರೀಗೋಕರ್ಣನಾಥ ದೇವಳ ಅಭಿವೃದ್ಧಿ ಸಮಿತಿ ಸದಸ್ಯೆ ಡಾ.ಅನುಸೂಯ ಮಾತನಾಡಿ, ವಿಧವೆ ಪದ ಬಳಕೆಯನ್ನೇ ನಿಷೇಧಿಸಬೇಕು. ಪತಿಯನ್ನು ಕಳೆದುಕೊಂಡ ಬಳಿಕ ತಾವು ಅಶಕ್ತರು ಎಂದು ಭಾವಿಸದೆ ತಮಗಾಗಿ ಬದುಕುವುದನ್ನು ಮಹಿಳೆಯರು ಕಲಿಯಬೇಕು. ಸ್ವಾವಲಂಬಿ ಜೀವನಕ್ಕೆ ಅಗತ್ಯವಾದ ಆರ್ಥಿಕ ಭದ್ರತೆಯನ್ನು ಕಲ್ಪಿಸಿಕೊಂಡಲ್ಲಿ ಯಾರಿಗೂ ಭಯಪಡಬೇಕಾಗಿಲ್ಲ ಎಂದರು.
ಅಮ್ಮ ವಿಧವೆಯಾಗಿದ್ದರಿಂದ, ಅವರಿಗೆ ಸೇರಿದ ಆಸ್ತಿಯನ್ನು ಚಿಕ್ಕಮ್ಮ ತಮ್ಮ ವಶಕ್ಕೆ ಮಾಡಿಕೊಳ್ಳಲು ಯತ್ನಿಸಿದರು. ಹರಿಣಿಯವರ ಸಹಕಾರದಿಂದ ನಿಗದಿತ ಮೊತ್ತ ದೊರೆತಿದೆ. ಈಗ ವಿಕಲಚೇತನರ ಮಕ್ಕಳಿಗಾಗಿ, ಅವರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವಲ್ಲಿ ದುಡಿಯುತ್ತಿದ್ದೇನೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಕಲಚೇತನೆ ವೈಷ್ಣವಿ ಅಭಿಪ್ರಾಯಿಸಿದರು.
ವಿಧವಾ ಮಹಿಳೆಯರಿಗೆ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಪ್ರತಿ ತಿಂಗಳು ದೇವಳದ ಸಭಾಂಗಣದಲ್ಲಿ ಸಭೆ ನಡೆಸಲಾಗುತ್ತದೆ. ಭಾಗವಹಿಸಿ ಮಾಹಿತಿ ಪಡೆಯಬಹುದು ಎಂದು ಕಾರ್ಯಕ್ರಮದ ಆಯೋಜಸಿ ಅಧ್ಯಕ್ಷತೆ ವಹಿಸಿದ್ದ ಹರಿಣಿ ಹೇಳಿದರು.
ಸುಖಲಾಕ್ಷಿ ಉಪಸ್ಥಿತರಿದ್ದರು. ಗುರುರಾಜ್ ಬುದ್ಧಿಯಾ ಸ್ವಾಗತಿಸಿ ವಂದಿಸಿದರು. ಸರ್ಕಾರದಿಂದ ವಿಧವೆಯರಿಗೆ ಸಿಗುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಅರ್ಜಿಗಳನ್ನು ಭರ್ತಿ ಮಾಡಲಾಯಿತು.