ವಿಧ್ಯಾರ್ಥಿಗಳಿಗೆ ಸಮವಸ್ತ್ರ, ಕೊಡೆ, ಬ್ಯಾಗ್ ವಿತರಣೆ
ಪುತ್ತೂರು, ಜೂ.23: ಕುಂಜೂರುಪಂಜ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿಯ ವಿದ್ಯಾರ್ಥಿಗಳಿಗೆ ಜೂ. 22ರಂದು ಉಚಿತ ಸಮವಸ್ತ್ರ, ಕೊಡೆ ಮತ್ತು ಬ್ಯಾಗ್ ವಿತರಣೆ ಮಾಡಲಾಯಿತು.
ಶಾಲಾ ಆಡಳಿತ ಮಂಡಳಿ, ಎಸ್‌ಡಿಎಂಸಿ ಮತ್ತು ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ 1ನೇ ತರಗತಿಗೆ ಸೇರ್ಪಡೆಗೊಂಡ 16 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್ ಗೌಡ ಸಮವಸ್ತ್ರ, ಕೊಡೆ ಹಾಗೂ ಬ್ಯಾಗ್‌ಗಳನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸಂಚಾಲಕ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ, ಈ ಬಾರಿ 1ನೇ ತರಗತಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದು, ಕ್ಲಸ್ಟರ್ ಮಟ್ಟದಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ದಾಖಲಿಸಿದ ಹೆಗ್ಗಳಿಕೆ ನಮ್ಮ ಶಾಲೆಗಿದೆ. ಶಾಲೆಯಲ್ಲಿ ಮಕ್ಕಳಿಗೆ ಬೇಕಾಗಿರುವ ಬಹುತೇಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆದರೆ ಸರ್ಕಾರವು ದಾಖಲಾತಿಗೆ ಪ್ರಾಯ ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ 5 ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲು ತೊಂದರೆಯಾಗಿದೆ ಆದಾಗ್ಯೂ ಈ ಮಕ್ಕಳಿಗೆ ಶಾಲೆಗೆ ಹಾಜರಾಗಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ತಾ.ಪಂ. ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಅವರ ರೂ.60 ಸಾವಿರ ಅನುದಾನದಲ್ಲಿ ಮತ್ತು ಸ್ಥಳೀಯರ ಸಹಯೋಗದಲ್ಲಿ ರೂ. 1ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಯೊಂದನ್ನು ದುರಸ್ತಿ ಪಡಿಸಿ ಸುಸಜ್ಜಿತಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಈ ಕೊಠಡಿ ಸದುಪಯೋಗವಾಗಲಿದೆ ಎಂದರು.
ಆಡಳಿತ ಮಂಡಳಿ ಸದಸ್ಯ ಎನ್. ಗೋಪಾಲ ಭಟ್ ಮಾತನಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಬಾರಿ ಹೆಚ್ಚಿನ ಮಕ್ಕಳ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮಕ್ಕಳು ತಮಗೆ ನೀಡಲಾಗಿರುವ ಸಮವಸ್ತ್ರ, ಕೊಡೆ ಹಾಗೂ ಬ್ಯಾಗ್‌ಗಳನ್ನು ಉತ್ತಮ ರೀತಿಯಲ್ಲಿಟ್ಟುಕೊಂಡು ಉಪಯೋಗಿಸಿಕೊಳ್ಳಬೇಕು ಎಂದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ವಿದ್ಯಾಪ್ರಭು, ಆಡಳಿತ ಮಂಡಳಿ ಸದಸ್ಯರಾದ ಇಸ್ಮಾಯಿಲ್ ಕೊಪ್ಪಳ, ಪ್ರಭಾಕರ ಫ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಉದಯ ಕುಮಾರ್ ಸ್ವಾಗತಿಸಿದರು. ಸಹಶಿಕ್ಷಕಿ ರಂಜನಿ ಎಂ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗೌರವ ಶಿಕ್ಷಕಿಯರಾದ ವಿನುತ ಮತ್ತು ಗುಣವತಿ ಸಹಕರಿಸಿದರು.