ಮನೆಯಂಗಳದಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮ
ಪುತ್ತೂರು, ಜೂ.23: ಕೌಟುಂಬಿಕ ಹಾಗೂ ಕೆಲಸದ ಒತ್ತಡಗಳಿಂದಾಗಿ ತಮ್ಮ ವೈಯುಕ್ತಿಕ ಆರೋಗ್ಯ ಮತ್ತಿತರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಬದುಕುತ್ತಿರುವ ಮಹಿಳೆಯರ ಮನಸ್ಸನ್ನು ಅರಳಿಸಿ ಅರಿವು ಮೂಡಿಸುವ ಮನೆಯಂಗಳದ ಮಹಿಳಾ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತಾಗಬೇಕೆಂದು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜಾ ಧನಂಜಯ್ ತಿಳಿಸಿದರು.
ಅವರು ಶುಕ್ರವಾರ ಜನ ಶಿಕ್ಷಣ ಟ್ರಸ್ಟ್, ದಿ ಹಂಗರ್ ಪ್ರೋಜೆಕ್ಟ್, ಜಾಗೃತಿ ವೇದಿಕೆಯ ಸಹಭಾಗಿತ್ವದಲ್ಲಿ ಕೊಳ್ತಿಗೆ ಗ್ರಾಮದ ಸುಗ್ರಾಮ ಸದಸ್ಯೆ ಯಶೋಧಾ ಅವರ ಮನೆಯಂಗಳದಲ್ಲಿ ನಡೆದ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆಯರ ಕುಂದುಕೊರತೆ ವಿಚಾರಣೆ, ಮಾಹಿತಿ ವಿನಿಮಯದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರ ಆರೋಗ್ಯ ಮತ್ತು ಅಭಿವೃದ್ಧಿಗೆ ಪೂರಕವಾಗಿರುವ ವೈಯುಕ್ತಿಕ ಗೃಹ ಹಾಗೂ ಗ್ರಾಮದ ಸಂಪೂರ್ಣ ಸ್ವಚ್ಚತೆ, ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಟಾನ, ಮಹಿಳೆಯರ ಮೇಲಿನ ಹಿಂಸೆಯನ್ನು ತಡೆಗಟ್ಟುವ ಕಾರ್ಯಗಳನ್ನು ಗ್ರಾಮ ಪಂಚಾಯತ್, ಸುಗ್ರಾಮ, ಜಾಗೃತಿ ವೇದಿಕೆಯ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಪುತ್ತೂರು ಮಹಿಳಾ ಪೋಲಿಸ್ ಠಾಣೆಯ ಎ.ಎಸ್.ಐ ಸೇಸಮ್ಮ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಇರುವ ವಿಶೇಷ ಕಾನೂನು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮಹಾತ್ಮಾಗಾಂಧೀ ನರೇಗಾದ ಮಾಜಿ ಓಂಬಡ್ಸ್‌ಮನ್ ಶೀನ ಶೆಟ್ಟಿ ಅವರು ಕಿಶೋರಿಯರ ಮತ್ತು ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ಹಿಂಸೆ, ಬಾಲ್ಯವಿವಾಹ, ಗೃಹ ಹಾಗೂ ಗ್ರಾಮದ ಸ್ವಚ್ಚತೆ, ದುಡಿಯುವ ಕೈಗಳಿಗೆ ಕೆಲಸದ ಖಾತರಿಯೊಂದಿಗೆ ನೆಲ ಜಲ ಸಂರಕ್ಷಣೆ, ಬಡವರ ಬದುಕಿಗೆ ಭದ್ರತೆ ನೀಡುವ ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ನೀಡಿ ಸಂವಾದ ನಡೆಸಿದರು.
ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮಿ, ಸದಸ್ಯೆಯರಾದ ಲಲಿತಾ, ವಾರಿಜ, ಗ್ರಾಮ ವಿಕಾಸ ಕೇಂದ್ರದ ಪ್ರೇರಕಿ ಪುಷ್ಪಲತಾ, ಸ್ಥಳೀಯ ಮುಖಂಡರಾದ ಧನಂಜಯ, ಅಮಲಾ ರಾಮಚಂದ್ರ, ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ, ಪೂರ್ಣಿಮಾ, ಆಶಾ ಕಾರ್ಯಕರ್ತೆ ರೇವತಿ ಸಂವಾದದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ಮನೆಯಂಗಳ ಮಹಿಳಾ ಜಾಗೃತಿ ಕಾರ್ಯಕ್ರಮವನ್ನು ಯಶೋಧಾ, ಕೋಟ್ಯಪ್ಪ ಪೂಜಾರಿ, ಅಶ್ವಥ್ ಸಂಯೋಜಿಸಿದರು.