ಜಂಕ್ಷನ್ ರೈಲು ನಿಲ್ದಾಣಕ್ಕೆ ಕೆಎಸ್ಸಾರ್ಟಿಸಿ ಬಸ್ ಸೌಲಭ್ಯ ಕಲ್ಪಿಸಲು ಮನವಿ
ಮಂಗಳೂರು, ಜೂ. 23: ನಗರದ ಸ್ಟೇಟ್‌ಬ್ಯಾಂಕ್‌ನಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಕೆಎಸ್ಸಾರ್ಟಿಸಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಪೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಹಂಪನಕಟ್ಟೆಯಿಂದ ನೇರ ಬಸ್ ಸೌಲಭ್ಯ ಇರುವುದಿಲ್ಲ. ಕಂಕನಾಡಿಯಿಂದ ಮಾತ್ರ ಇದೆ. ಹಂಪನಕಟ್ಟೆಯಿಂದ ಪಂಪ್‌ವೆಲ್ ಮಾರ್ಗವಾಗಿ ಬಜಾಲ್, ವೀರನಗರ ಕಡೆಗೆ ಹೋಗುವ ಬಸ್ಸುಗಳು ಈ ರೈಲು ನಿಲ್ದಾಣ ಸಮೀಪದಿಂದ ಹಾದು ಹೋಗುತ್ತವೆ. ನೇರವಾಗಿ ಅವೂ ರೈಲು ನಿಲ್ದಾಣಕ್ಕೆ ಹೋಗುವುದಿಲ್ಲ. ಸಾರ್ವಜನಿಕರು ಆಟೊರಿಕ್ಷಾಗಳನ್ನು ಅವಲಂಬಿಸಬೇಕಿದೆ. ಆದ್ದರಿಂದ ಕೆಎಸ್ಸಾರ್ಟಿಸಿ ಬಸ್‌ಗಳ ಸೌಲಭ್ಯವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗುವುದು ಎಂದರು.
ಕದ್ರಿ ಮಲ್ಲಿಕಟ್ಟೆಯ ನವೀಕೃತ ವೃತ್ತವು ಗಾತ್ರದಲ್ಲಿ ಬಹಳಷ್ಟು ಅಗಲವಾಗಿದ್ದು, ವಾಹನ ಸಂಚಾರಕ್ಕೆ ಅಡೆ ತಡೆ ಉಂಟಾಗುತ್ತದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ಕುರಿತು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಹಂಪ್‌ಗಳ ಬಗ್ಗೆ ಕೇಳಿ ಬಂದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ನಗರದ ವಿವಿಧ ರಸ್ತೆಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಯ ದೃಷ್ಟಿಯಿಂದ ಹಲವಾರು ಹಂಪ್‌ಗಳನ್ನು ಹಾಕಲಾಗಿದೆ. ಇನ್ನೂ ಕೆಲವು ಕಡೆ ಹಂಪ್‌ಗಳಿಗೆ ಬೇಡಿಕೆ ಬಂದಿವೆ. ಆದರೆ ಹಂಪ್‌ಗಳು ಮಿತಿಗಿಂತ ಹೆಚ್ಚಾದರೆ ಸಂಚಾರಕ್ಕೆ ತೊಡಕಾಗುತ್ತದೆ. ಆದ್ದರಿಂದ ರಬ್ಬರ್ ನಿರ್ಮಿತ ಹಂಪ್‌ಗಳನ್ನು ಹಾಕುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಮಂಗಳೂರಿನಿಂದ ರಾತ್ರಿ ವೇಳೆ ಳ್ನೀರ್ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಲವು ಬಸ್ಸುಗಳು ರೂಟ್ ಬದಲಾಯಿಸಿ ಜ್ಯೋತಿ ವೃತ್ತವಾಗಿ ಸಂಚರಿಸುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತದೆ. ಉಳ್ಳಾಲದಿಂದ ತೊಕ್ಕೋಟು- ಕಂಕನಾಡಿ- ನಂತೂರು- ಬೋಂದೆಲ್ ಮಾರ್ಗವಾಗಿ ಕುಂಜತ್ತಬೈಲ್‌ಗೆ ಓಡಾಡುತ್ತಿದ್ದ ಸಿಟಿ ಬಸ್ ಸಂಚಾರ ನಿಲ್ಲಿಸಲಾಗಿದೆ ಎಂಬ ದೂರು ಕೇಳಿ ಬಂತು.