ನೀಟ್ ಫಲಿತಾಂಶ ಪ್ರಕಟ;ನವದೀಪ್ ಸಿಂಗ್ ಪ್ರಥಮ, ಬಾಲಕಿಯರ ಮೇಲುಗೈ

Update: 2017-06-23 13:51 GMT

ಇಂದೋರ್, ಜೂ.23: ಮೆಡಿಕಲ್, ಡೆಂಟಲ್, ಆಯುಷ್ ಮತ್ತು ಪಶುವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)-2107ರ ಫಲಿತಾಂಶ ಪ್ರಕಟವಾಗಿದ್ದು ಪಂಜಾಬ್‌ನ ನವದೀಪ್ ಸಿಂಗ್ ಅಗ್ರಸ್ಥಾನಿಯಾಗಿದ್ದಾರೆ.

   10,90,085 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 6,11,539 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇವರಲ್ಲಿ 2,66,221 ಬಾಲಕರು ಮತ್ತು 3,45,313 ಬಾಲಕಿಯರು. ಎಂಟು ತೃತೀಯ ಲಿಂಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಐವರು ತೇರ್ಗಡೆಯಾಗಿದ್ದಾರೆ.

ಸ್ನೇಹಿತರ ಸಮಬಲದ ಸಾಧನೆ: ಈ ಬಾರಿ ‘ನೀಟ್’ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಇಂದೋರ್‌ನ ಇಬ್ಬರು ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಅರ್ಚಿತ್ ಗುಪ್ತ ಮತ್ತು ಮನೀಷ್ ಮೂಲ್‌ಚಂದಾನಿ ಎಂಬ ವಿದ್ಯಾರ್ಥಿಗಳು ಆತ್ಮೀಯ ಮಿತ್ರರು. ನೀಟ್ ಪರೀಕ್ಷೆಗೆ ಜೊತೆಯಾಗಿ ಅಭ್ಯಾಸ ನಡೆಸಿದ ಇವರಿಬ್ಬರು ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ಮಿಂಚಿದ್ದಾರೆ.

ಪರೀಕ್ಷೆಗೆ ಪೂರ್ವ ತಯಾರಿ ಮಾಡಲೆಂದು ಮನೆಬಿಟ್ಟು ತೆರಳಿದ ಇವರಿಬ್ಬರು ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಇಬ್ಬರೂ ಜತೆಯಾಗಿಯೇ ಕೋಚಿಂಗ್ ತರಗತಿಗೆ ಹೋಗುತ್ತಿದ್ದರು.

  ನನ್ನ ಮನೆ ಇಂದೋರ್‌ನಲ್ಲೇ ಇದ್ದರೂ ಮನೆಯಲ್ಲಿದ್ದರೆ ಅಭ್ಯಾಸಕ್ಕೆ ತೊಂದರೆ ಎಂದರಿತು ಹಾಸ್ಟೆಲ್‌ಗೆ ವಾಸ್ತವ್ಯ ಬದಲಿಸಿದೆ. ಅಧ್ಯಯನಕ್ಕೆ ಯಾವುದೇ ಸೂಚಿತ ಪಟ್ಟಿ ಇರಲಿಲ್ಲ. ನನಗೆ ಇಷ್ಟಬಂದ ಪುಸ್ತಕ ಆರಿಸಿಕೊಂಡು ಓದುತ್ತಿದ್ದೆ. ನನ್ನ ದೌರ್ಬಲ್ಯ ಏನು, ಯಾವ ವಿಷಯ ಕಷ್ಟ ಎಂಬುದನ್ನು ತಿಳಿದುಕೊಂಡು ಆ ಬಗ್ಗೆ ಗಮನ ಕೇಂದ್ರೀಕರಿಸುತ್ತಿದ್ದೆ ಎಂದು ಅರ್ಚಿತ್ ಗುಪ್ತ ಹೇಳುತ್ತಾರೆ.

ಲಂಡನ್‌ನಲ್ಲಿ ಜುಲೈ 23ರಂದು ನಡೆಯುವ ಒಲಿಂಪಿಯಾಡ್‌ನಲ್ಲಿ 17ರ ಹರೆಯದ ಅರ್ಚಿತ್ ಗುಪ್ತ ಭಾರತವನ್ನು ಪ್ರತಿನಿಧಿಸಲಿದ್ದಾರೆ.

  ಅರ್ಚಿತ್ ಮತ್ತು ನನ್ನ ಮಧ್ಯೆ ಯಾವಾಗಲೂ ಸ್ಪರ್ಧೆ ಇತ್ತು. ಆದರೆ ಇದು ಆರೋಗ್ಯಕರ ಸ್ಪರ್ಧೆ. ಇದುವೇ ನಮ್ಮಿಬ್ಬರ ಯಶಸ್ಸಿಗೆ ಕಾರಣ. ನನ್ನ ಕಠಿಣ ಪರಿಶ್ರಮಕ್ಕೆ ಇಂದು ಫಲ ದೊರೆತಿದೆ ಎಂದು ಮೂಲ್‌ಚಂದಾನಿ ಹೇಳುತ್ತಾರೆ. ಶಾಲೆಯಲ್ಲಿ ಅಗ್ರಸ್ಥಾನ ಗಳಿಸಿದವರೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯಬೇಕು ಎಂದೇನೂ ಇಲ್ಲ ಎಂಬುದು ಪಿಯುಸಿ ಪರೀಕ್ಷೆಯಲ್ಲಿ ಶೇ.84 ಅಂಕ ಗಳಿಸಿದ್ದ ಮೂಲ್‌ಚಂದಾನಿಯ ಅಭಿಪ್ರಾಯ.

ಗುಪ್ತ ಮತ್ತು ಮೂಲ್‌ಚಂದಾನಿ ಇಬ್ಬರೂ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ (ಎಐಐಎಂಎಸ್) ಎಂಬಿಬಿಎಸ್ ಪರೀಕ್ಷೆಗೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಅಗ್ರ 10 ಸ್ಥಾನ ಪಡೆದವರಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News