ಬೆಳಪು: ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಅನುದಾನ ಬಿಡುಗಡೆ

Update: 2017-06-23 14:48 GMT

ಪಡುಬಿದ್ರೆ, ಜೂ.23: ಉಡುಪಿ ಜಿಲ್ಲೆಯ ಬೆಳಪು ಗ್ರಾಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಸ್ಥಾಪಿಸಲ್ಪಡುವ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ತಗಲುವ ಅಂದಾಜು ವೆಚ್ಚ 126 ಕೋಟಿ ರೂ. ಮಂಜೂರಾತಿ ನೀಡಿ, 50 ಕೋಟಿ ರೂ. ಕರ್ನಾಟಕ ಸರಕಾರ ತಕ್ಷಣ ಬಿಡುಗಡೆಗೊಳಿಸುವಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಕಳೆದ 2 ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳಪುವಿಗೆ ಆಗಮಿಸಿ ಯೋಜನೆಗೆ ಚಾಲನೆ ನೀಡಿದ್ದು, 2016-17ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಘೋಷಿಸಿದ್ದರು. ದಕ್ಷಿಣ ಭಾರತದಲ್ಲಿ ಪ್ರಪ್ರಥಮವೆಂಬಂತೆ ಅತ್ಯಾಧುನಿಕವಾಗಿ ಜಪಾನ್ ಮಾದರಿಯಲ್ಲಿ ಸ್ಥಾಪಿಸಲ್ಪಡುವ ಸಂಶೋಧನಾ ಕೇಂದ್ರ ಇದಾಗಿದ್ದು, ಅವಿಭಜಿತ ಜಿಲ್ಲೆಯಲ್ಲಿ ಸಂಶೋಧನಾ ಕೇಂದ್ರಕ್ಕೆ ಅವಕಾಶ ನೀಡುವ ಮೂಲಕ ಸಂಶೋಧಕರಿಗೆ, ಮುಂದಿನ ಯುವ ಪೀಳಿಗೆಗೆ ಉಜ್ವಲ ಅವಕಾಶ ಲಭಿಸಿದಂತಾಗಿದೆ.

ಭೀಕರ ರೋಗಗಳಿಗೆ ಔಷಧ ಸಂಶೋಧನೆ, ಪಶ್ಚಿಮ ಘಟ್ಟ ತಪ್ಪಲಿನ ಗಿಡ-ಮೂಲಿಕೆಗಳಿಂದ ಔಷಧಿ ತಯಾರಿಕಾ ಸಂಶೋಧನೆ ಸಹಿತ ನ್ಯಾನೊ ಮಾದರಿಯ ಕಾರುಗಳ ತಯಾರಿಕೆಯ ಬಗ್ಗೆ ಸಂಶೋಧನಾ ಕೇಂದ್ರವಾಗಿದೆ.

ಕಾಮಗಾರಿಗೆ ಶೀಘ್ರ ಚಾಲನೆ :

ಬೆಳಪು ಗ್ರಾಮದಲ್ಲಿ ವಿಶ್ವವಿದ್ಯಾನಿಲಯದ ಕೋರಿಕೆಯಂತೆ 20 ಎಕ್ರೆ ಜಮೀನು ಹಸ್ತಾಂತರಿಸಿದ್ದು, ಮತ್ತೆ 10 ಎಕ್ರೆ ಹೆಚ್ಚುವರಿ ಭೂಮಿ ನೀಡಲು ಜಿಲ್ಲಾಧಿಕಾರಿಯವರಿಗೆ ಉಪಕುಲಪತಿಯವರು ಮನವಿ ಮಾಡಿದ್ದಾರೆ. ಇದು ಕೂಡಾ ಮಂಜೂರಾತಿ ಹಂತದಲ್ಲಿದ್ದು, ಪ್ರಥಮ ಹಂತದ ರೂ. 126 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ರೂ. 50 ಕೋಟಿ ಮಂಜೂರಾತಿ ನೀಡಿದೆ. ಉಳಿದ  76 ಕೋಟಿ ರೂ. ವೆಚ್ಚವನ್ನು ವಿಶ್ವವಿದ್ಯಾನಿಲಯದಿಂದ ಭರಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮುಂದೆ ರುಸ್ಸಾ ಯೋಜನೆಯಡಿ 400 ಕೋಟಿಯಷ್ಟು ಅನುದಾನ ಬರಲಿದ್ದು, ಇದೊಂದು ವಿಶ್ವದರ್ಜೆ ಮಾದರಿಯಲ್ಲಿ ಸಂಶೋಧನಾ ಕೇಂದ್ರವಾಗಲಿದೆ. ಕರಾವಳಿ ಜಿಲ್ಲೆ ಬ್ಯಾಂಕಿಂಗ್, ಕೈಗಾರಿಕೆ, ಶಿಕ್ಷಣ ಮತ್ತು ಪ್ರವಾಸೋದ್ಯಮದ ಕ್ಷೇತ್ರದ ಉಗಮವಾಗಿದ್ದು ಇದೀಗ ಸಂಶೋಧನಾ ಕೇಂದ್ರ ಸ್ಥಾಪನೆಯಾಗುವ ಮೂಲಕ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ ಎಂದು ಕಾಪು ಕ್ಷೇತ್ರದ ಶಾಸಕ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News