ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪತ್ರ: ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್

Update: 2017-06-23 15:05 GMT

ಮಂಗಳೂರು, ಜೂ. 23: ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಸ್ಟೇಟ್ ಬ್ಯಾಂಕ್‌ನಿಂದಲೂ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವ ಕುರಿತಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಆಯೋಜಿಸಲಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರ ಬೇಡಿಕೆಗೆ ಅವರು ಈ ಉತ್ತರ ನೀಡಿದರು.

ಪ್ರಸ್ತುತ ಕಂಕನಾಡಿಯಿಂದ ಮಂಗಳೂರು ಜಂಕ್ಷನ್ ರೈಲ್ವೇ ಸ್ಟೇಷನ್‌ಗೆ ಬಸ್ ವ್ಯವಸ್ಥೆ ಇದೆ. ಸ್ಟೇಟ್‌ಬ್ಯಾಂಕ್‌ನಿಂದಲೂ ವ್ಯವಸ್ಥೆ ಕಲ್ಪಿಸಿದರೆ, ಬಹಳಷ್ಟು ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಹಂಪನಕಟ್ಟೆಯಿಂದ ಬಜಾಲ್, ವೀರನಗರ ಕಡೆಗೆ ಹೋಗುವ ಕೆಲವು ಬಸ್ಸುಗಳು ಈ ರೈಲು ನಿಲ್ದಾಣ ಸಮೀಪದಿಂದ ಹಾದು ಹೋಗುತ್ತವೆ. ನೇರವಾಗಿ ರೈಲು ನಿಲ್ದಾಣಕ್ಕೇ ಅವು ಹೋಗುವುದಿಲ್ಲ. ಈ ನಿಟ್ಟಿನಲ್ಲಿ ಸರಕಾರಿ ಬಸ್‌ಗಳ ಅವಶ್ಯಕತೆಯಿದೆ ಎಂದು ಸಾರ್ವಜನಿಕರೊಬ್ಬರು ಆಗ್ರಹಿಸಿದರು.

ನಗರದಲ್ಲಿ ಟ್ರಾಫಿಕ್ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಸಂಜೆ ಮತ್ತು ಬೆಳಗ್ಗಿನ ಹೊತ್ತು ಶಾಲಾ ವಾಹನಗಳು ರಸ್ತೆ, ಫೂಟ್‌ಪಾತ್‌ಗಳಲ್ಲಿ ಪಾರ್ಕ್ ಮಾಡುತ್ತಿರುವುದರಿಂದ ಈ ಸಮಸ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಶಾಲಾ ವಾಹನಗಳಿಗೆ ಕ್ಯಾಂಪಸ್‌ನೊಳಗೆ ಅವಕಾಶ ನೀಡಿದರೆ ಸಮಸ್ಯೆ ಬಗೆಹರಿಯಲಿದೆ ಎಂಬ ಎಂಬ ಸಲಹೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದರು.

ನಗರದಲ್ಲಿ ಬೇಕಾಬಿಟ್ಟಿಯಾಗಿ ಹಂಪ್‌ಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕಮಿಷನರ್ ಅಧಿಕಾರಿಗಳ ಜತೆ ಮಾತನಾಡಿ, ಹಂಪ್‌ಗಳ ಬಗ್ಗೆ ಹಾಗೂ ರಬ್ಬರ್ ನಿರ್ಮಿತ ಹಂಪ್‌ಗಳನ್ನು ಹಾಕುವ ಬಗ್ಗೆ ಪರಿಶೀಲಿಸಬೇಕು ಎಂದರು.

ಕೆಲ ಸಿಟಿ ಬಸ್‌ಗಳ ಚಾಲಕರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಿದ್ದು, ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ಬಹಳಷ್ಟು ಸಮಸ್ಯೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳ ಬೇಕೆಂಬ ಆಗ್ರಹವೂ ವ್ಯಕ್ತವಾಯಿತು.

ಮಹಾನಗರ ಪಾಲಿಕೆ ವತಿಯಿಂದ ನಡೆಯುವ ರಸ್ತೆ ಮತ್ತು ಇತರ ಸಾರ್ವಜನಿಕ ಕಾಮಗಾರಿಗಳ ಬಗ್ಗೆ ವಾರಕ್ಕೊಮ್ಮೆ ಪಾಲಿಕೆಗೆ ರಿಮೈಂಡರ್ ಕಳುಹಿಸುವಂತೆ ಕಮಿಷನರ್ ಅವರು ಸಂಚಾರ ವಿಭಾಗದ ಎಸಿಪಿ ತಿಲಕ್‌ಚಂದ್ರ ಅವರಿಗೆ ಸೂಚನೆ ಮಾಡಿದರು.
ಡಿಸಿಪಿಗಳಾದ ಕೆ. ಎಂ. ಶಾಂತರಾಜು ಮತ್ತು ಹನುಮಂತರಾಯ, ಎಸಿಪಿ ತಿಲಕ್‌ಚಂದ್ರ, ಎಎಸ್‌ಐ ಯೂಸುಫ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಅವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News