ಇನ್ನು ಮುಂದೆ ಮೀನುಗಾರರ ಸಬ್ಸಿಡಿ ಮೊತ್ತ ನೇರ ಖಾತೆಗೆ: ಸಚಿವ ಖಾದರ್‌

Update: 2017-06-23 16:28 GMT

ಮಂಗಳೂರು, ಜೂ. 23: ಮುಂದಿನ ಆಗಸ್ಟ್‌ನಲ್ಲಿ ಆರಂಭವಾಗುವ ಮೀನುಗಾರಿಕಾ ಋತುವಿನಿಂದ ಮೀನುಗಾರರಿಗೆ ಸಿಗುವ ಮಾಸಿಕ ಸೀಮೆಎಣ್ಣೆ ಯ ಸಬ್ಸಿಡಿಯನ್ನು ನೇರವಾಗಿ ಆರ್‌ಟಿಜಿಎಸ್ ಮುಖಾಂತರ ಅವರ ಖಾತೆಗೆ ಜಮಾ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಮೀನುಗಾರರು ಸಬ್ಸಿಡಿಲ್ಲಿ ಸೀಮೆ ಎಣ್ಣೆಯನ್ನು ಒದಗಿಸಲಾಗುತ್ತಿದೆ. ಆದರೆ ಇನ್ನು ಮುಂದೆ ಮೀನುಗಾರರು ತಮ್ಮ ಬೋಟ್‌ಗಳಿಗೆ ಹೊರ ಮಾರುಕಟ್ಟೆಯಲ್ಲಿ ಸೀಮೆಎಣ್ಣೆಯನ್ನು ಖರೀದಿಸಬೇಕು. ಅದರ ಸಬ್ಸಿಡಿ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದರು.

ಶೀಘ್ರದಲ್ಲೇ ಅರ್ಜಿ ಸಲ್ಲಿಸಿದವರಿಗೆ ಹೊಸ ಕಾರ್ಡ್‌: ಪಡಿತರ ಚೀಟಿಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಶೀಘ್ರಜದಲ್ಲೇ ಹೊಸ ಪಡಿತರ ಕಾರ್ಡ್ ವಿತರಣೆಯಾಗಲಿದೆ ಎಂದು ಸಚಿವ ಖಾದರ್ ತಿಳಿಸಿದರು.

ಈ ಹಿಂದೆ ತಾಂತ್ರಿಕ ಕಾರಣಗಳಿಂದ ಪಡಿತರ ಅರ್ಜಿಗಳನ್ನು ಪರಿಶೀಲಿಸುವಲ್ಲಿ ತೊಡಕು ಉಂಟಾಗಿತ್ತು. ಈಗ ತೊಂದರೆಯನ್ನು ನಿವಾರಿಸಲಾಗಿದೆ. ಗ್ರಾಮಕರಣಿಕರು ಪಡಿತರ ಅರ್ಜಿಗಳನ್ನು ಅಡ್ಡ ಪರಿಶೀಲನೆ ನಡೆಸಲಿದ್ದಾರೆ. ಆಧಾರ್ ಸಂಖ್ಯೆ, ಕುಟುಂಬದ ವಾರ್ಷಿಕ ಆದಾಯ ಇತ್ಯಾದಿಗಳನ್ನು ಪರಿಶೀಲಿಸಿ ಶಿಫಾರಸು ಮಾಡಿದ ಬಳಿಕವೇ ಹೊಸ ಪಡಿತರ ಕಾರ್ಡ್ ಮುದ್ರಣಗೊಳ್ಳಲಿದೆ ಎಂದು ಖಾದರ್ ಹೇಳಿದರು.

ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲಿ: ರಾಜ್ಯದ ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಿರುವ ಸರಕಾರದ ಕ್ರಮವನ್ನು ಸ್ವಾಗತಿಸಿರುವ ಸಚಿವ ಖಾದರ್, ಕೇಂದ್ರ ಸರಕಾರವೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಲಿ. ಈ ಮೂಲಕ ಸಾಲ ಮನ್ನಾದ ಲಾಭ ಎಲ್ಲರ ರೈತರು ಪಡೆಯುವಂತಾಗಲಿ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಿದ ಬಳಿಕ ಸರಕಾರದ ಜನಪ್ರಿಯತೆಯನ್ನು ಸಹಿಸದ ವಿಪಕ್ಷಗಳು ಮತ್ತೆ ಡೈರಿ ಲಂಚ ಪ್ರಕರಣವನ್ನು ಎತ್ತಿವೆ ಎಂದು ಆರೋಪಿಸಿದರು.

ಸಚಿವರ ಕ್ರಮ ಸರಿಯಾಗಿದೆ: ಜಿಲ್ಲೆಯ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲಾ ವರಿಷ್ಠಾಧಿಕಾರಿಯವರನ್ನು ಕರೆಸಿ ಸೂಚನೆ ನೀಡಿರುವ ಕ್ರಮ ಸರಿಯಾಗಿದೆ. ಓರ್ವ ಜನಪ್ರತಿನಿಧಿಯಾಗಿ ಹಾಗೂ ಜಿಲ್ಲಾ ಸಚಿವರಾಗಿ ಅವರು ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ ಎಂದು ಖಾದರ್ ಹೇಳಿದರು.

ಭಾರತದಲ್ಲಿ ಪಾಕ್‌ಗೆ ಕ್ರಿಕೆಟ್ ಅವಕಾಶ ನೀಡಬಾರದು: ಭಾರತದಲ್ಲಿ ಪಾಕಿಸ್ತಾನ ಕ್ರಿಕೆಟ್ ಆಟಕ್ಕೆ ಅವಕಾಶ ನೀಡಬಾರದು. ಇದರಿಂದಾಗಿ ದೇಶದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆಂದು ಆರೋಪಿಸುವುದು, ಅಶಾಂತಿಯ ವಾತಾವರಣ ನಿರ್ಮಾಣವಾಗುವುದನ್ನು ತಡೆಯಬಹುದು. ಹಿಂದೆ ಯುಪಿಎ ಸರಕಾರ ಇದ್ದಾಗ ಭಾರತದಲ್ಲಿ ಪಾಕಿಸ್ತಾನದ ಕ್ರಿಕೆಟ್ ಪಂದ್ಯಕ್ಕೆ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಆಕ್ಷೇಪ ಎತ್ತಿದ್ದವು. ಆದರೆ ಈಗ ಕೇಂದ್ರ ಸರಕಾರ ಭಾರತದಲ್ಲಿ ಪಾಕಿಸ್ತಾನಕ್ಕೆ ಕ್ರಿಕೆಟ್ ಆಟ ಆಡುವುದಕ್ಕೆ ಅವಕಾಶ ನೀಡಿದೆ. ಈ ಮೂಲಕ ದೇಶದಲ್ಲಿ ಅಹಿತಕರ ಘಟನೆಗೆ ಆಸ್ಪದವನ್ನು ನೀಡಿದಂತಾಗಿದೆ ಎಂದು ಯು.ಟಿ.ಖಾದರ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಮುಖಂಡರಾದ ಸಂತೋಷ್ ಶೆಟ್ಟಿ, ಪದ್ಮನಾಭ ನರಿಂಗಾನ, ರಮೇಶ್ ಶೆಟ್ಟಿ, ಸುರೇಶ್, ಸಿದ್ದೀಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News