ಕೇಂದ್ರದ ಅನುದಾನ ಬಳಸುವಲ್ಲಿ ರಾಜ್ಯ ಸರಕಾರ ವಿಫಲ: ಯಡಿಯೂರಪ್ಪ

Update: 2017-06-23 16:31 GMT

ಉಡುಪಿ, ಜೂ.23: ನರೇಂದ್ರ ಮೋದಿ ಸರಕಾರ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಾಜ್ಯ ಸರಕಾರಕ್ಕೆ ಅನುದಾನವನ್ನು ನೀಡುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಅನುದಾನವನ್ನು ಸಮರ್ಪಕ ಬಳಕೆ ಮಾಡದೆ ಕಾಟಾಚಾರಕ್ಕೆ ಅಬಿವೃದ್ಧಿ ಕಾರ್ಯಗಳನ್ನು ತೋರಿಸಿ, ನಮ್ಮದೆ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಟೀಕಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಅಮ್ಮಣ್ಣಿ ರಾಮಣ್ಣ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಲಾದ ಜನಸಂಪರ್ಕ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪಕ್ಷದ ಕಾರ್ಯಕರ್ತರು ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಪಕ್ಷದ ಭಲವರ್ದನೆಗೆ ಬೂತ್‌ಮಟ್ಟದಲ್ಲಿ ತಲಾ 25 ಕಾರ್ಯಕರ್ತರನ್ನು ಆಯ್ದು ಉತ್ತಮ ತರಬೇತಿ ನೀಡಬೇಕು. ಈ ಮೂಲಕ ವಿಧಾನಸಭೆಯ ಎಲ್ಲಾ ಐದು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಬೇಕು. ರಾಜ್ಯ ಸರಕಾರದ ವೈಫಲ್ಯ ಗಳನ್ನು, ಕೇಂದ್ರ ಸರಕಾರದ ಸಾಧನೆಗಳನ್ನು ಜನತೆಗೆ ತಿಳಿಸುವ ಕೆಲಸ ಕಾರ್ಯ ಕರ್ತರಿಂದ ಪರಿಣಾಮಕಾರಿಯಾಗಿ ನಡೆಯಬೇಕು ಎಂದರು.
ಸಂಸದೆ ಶೋಭ ಕರಂದ್ಲಾಜೆ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಶಾಸಕ ಸುನೀಲ್ ಕುಮಾರ್, ಜಿಪಂ ಅಧ್ಯಕ್ಷ ದಿನಕರ ಬಾಬು, ಪಕ್ಷದ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಲಾಲಜಿ ಮೆಂಡನ್, ಶ್ಯಾಮಲಾ ಕುಂದರ್, ನಾಗರಾಜ್ ಶೆಟ್ಟಿ, ರವಿ ಕುಮಾರ್, ಪ್ರಭಾಕರ ಪೂಜಾರಿ, ಸುರೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಸಿಎಂ ವಿರುದ್ಧ ಏಕವಚನದಲ್ಲಿ ಗುಡುಗು
ಬಡವರ, ದಲಿತರ, ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಂಗೆ ಇಲ್ಲ. ಅವರ ಬಗ್ಗೆ ಕಾಳಜಿ ಇರುತ್ತಿದ್ದರೆ ರೈತರ ಸಾಲವನ್ನು ಕೇವಲ 50 ಸಾವಿರ ರೂ. ಮನ್ನಾ ಯಾಕೆ ಮಾಡಿದ್ದು. ಒಂದು ಲಕ್ಷ ರೂ.ವರೆಗೆ ಸಾಲ ಮನ್ನಾ ಮಾಡಲು ನಿಂಗೇನೊ ದಾಡಿ ಸಿದ್ರಾಮಯ್ಯ ಎಂದು ಯಡಿಯೂರಪ್ಪ ಸಿಎಂ ವಿರುದ್ಧ ಏಕವಚನದಲ್ಲಿ ಮಾತಿನ ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News