ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್‌ಗಳಿಸಿದ ಶಿರಾಲಿಯ ಶ್ರೇಯಾಂಕ್ ಶೇಟ್

Update: 2017-06-23 17:56 GMT

ಭಟ್ಕಳ, ಜೂ. 23: ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 616 ಅಂಕಗಳನ್ನು ಗಳಿಸಿದ್ದ ತಾಲೂಕಿನ ಶಿರಾಲಿ ಚಿತ್ರಾಪುರದ ಶ್ರೇಯಾಂಕ್ ಶ್ರೀಧರ ಶೇಟ್ ಮರು ಮೌಲ್ಯಮಾಪನದಲ್ಲಿ ಸಮಾಜ ವಿಜ್ಞಾನ ವಿಷಯಕ್ಕೆ 4 ಅಂಕಗಳನ್ನು ಹೆಚ್ಚಿಗೆ ಗಳಿಸುವುದರ ಮೂಲಕ 625 ಅಂಕಗಳಿಗೆ 620 (99.2%) ಅಂಕಗಳನ್ನು ಪಡೆದು ರಾಜ್ಯಕ್ಕೆ 6ನೆ ರ್ಯಾಂಕ್, ತಾಲೂಕಿಗೆ 2ನೇ ರ್ಯಾಂಕ್ ಮತ್ತು ಶಾಲೆಗೆ ಪ್ರಥಮ ಸ್ಥಾನ ಗಳಿಸಿರುತ್ತಾನೆ. ಇಂಗ್ಲೀಷ್ ಭಾಷೆಗೆ 125 ಅಂಕಗಳಿಗೆ 125, ಕನ್ನಡ ಭಾಷೆಗೆ 100 ಅಂಕಗಳಿಗೆ 100, ಹಿಂದಿ, ವಿಜ್ಞಾನ ಮತ್ತು ಸಮಾಜಕ್ಕೆ 99 ಹಾಗೂ ಗಣಿತಕ್ಕೆ 98 ಅಂಕಗಳನ್ನು ಗಳಿಸಿದ್ದಾನೆ.

ಪಠ್ಯೇತರ ವಿಷಯಗಳಲ್ಲೂ ಮುಂದಿರುವ ಈತನು ಈ ಹಿಂದೆ ಭಾರತ್ ಕೊ ಜಾನೊ ಕ್ವಿಝ್, ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ವಿಜೇತನಾಗಿರುವುದನ್ನು ಸ್ಮರಿಸಿಕೊಳ್ಳಬಹುದು.

ಭಟ್ಕಳದ ಆನಂದಾಶ್ರಮ ಕಾನ್ವೆಂಟ್ ಹೈಸ್ಕೂಲ್ ವಿದ್ಯಾರ್ಥಿಯಾಗಿರುವ ಈತನು ಶಿರಾಲಿಯ ಶಿಕ್ಷಕ, ಸಾಹಿತಿ, ಕಲಾವಿದ, ವ್ಯಂಗ್ಯ ಚಿತ್ರಕಾರ ಮತ್ತು ಕಾರ್ಯಕ್ರಮ ನಿರೂಪಕ ಶ್ರೀಧರ ಗಣೇಶ ಶೇಟ್ ಮತ್ತು ಶಿಕ್ಷಕಿ ಹೇಮಲತಾ ದಂಪತಿಯ ಪುತ್ರ. ಈತನ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಯ ಮುಖ್ಯಾಧ್ಯಾಪಕಿ ಮತ್ತು ಶಿಕ್ಷಕ ವೃಂದದವರು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News