×
Ad

ದೇವರ ಹೆಸರಿನಲ್ಲಿ ಸಂಘರ್ಷ ನಡೆಸುವವರು ಪಿಶಾಚಿಗಳು: ಲೋಬೊ

Update: 2017-06-24 12:37 IST

ಮಂಗಳೂರು, ಜೂ.24: ದೇವರ ಹೆಸರಿನಲ್ಲಿ ಸಂಘರ್ಷ ನಡೆಸುವವರು, ಅದಕ್ಕೆ ಕಾರಣರಾಗುವವರು ದೇವರ ಮಕ್ಕಳಲ್ಲ, ಅವರು ಪಿಶಾಚಿಗಳು ಎಂದು ಶಾಸಕ ಜೆ.ಆರ್. ಲೋಬೊ ಅಭಿಪ್ರಾಯಿಸಿದ್ದಾರೆ.

ಅವರು ಇಂದು ಜಪ್ಪಿನಮೊಗರು ಮಹಾಕಾಳಿಪಡ್ಪು ಬಳಿಯ ಸಂಕಪ್ಪ ಸ್ಮಾರಕ ಸಭಾಂಗಣದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ವಿವಿಧ ಗ್ರಾಮಗಳ ಫಲಾನುಭವಿಗಳಿಗೆ ಸರಕಾರದಿಂದ ಮಂಜೂರಾದ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಎಲ್ಲಾ ಧರ್ಮಗಳು ಸೌಹಾರ್ದವನ್ನು ಸಾರುತ್ತವೆ. ಹಾಗಿದ್ದರೂ ಕೆಲವು ವ್ಯಕ್ತಿಗಳಿಂದಾಗಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಪರಸ್ಪರ ತಿಳಿ ಹೇಳುವ ಕಾರ್ಯ ಮಾಡಬೇಕು. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯೊಂದಿಗೆ ಸೌಹಾರ್ದವನ್ನು ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಹಾಗೂ ಪಾತ್ರ ಅತ್ಯಗತ್ಯ ಎಂದು ಎಂದವರು ಹೇಳಿದರು.

ಸರಕಾರ ಎಲ್ಲಾ ವರ್ಗದ ಜನರ ಬಗ್ಗೆ ಗಮನ ಹರಿಸಿ ವಿವಿಧ ಸವಲತ್ತು, ಸೌಲಭ್ಯಗಳ ಮೂಲಕ ಅಭಿವೃದ್ಧಿಗೆ ಸಹಕರಿಸುತ್ತಿದೆ. ಇದೀಗ ಸರಕಾರವು 50,000 ರೂ.ವರೆಗೆ ಕೃಷಿ ಸಾಲಮನ್ನಾ ಮಾಡಿದೆ. ಇದರಿಂದ ಸರಕಾರಕ್ಕೆ 8,500 ಕೋಟಿ ರೂ.ಗಳಿಗೂ ಅಧಿಕ ಹೊರೆಯಾಗಲಿದೆ. ಆದರೆ ಬಡವರ ಬಗ್ಗೆ ಕಾಳಜಿಯಿಂದ ಈ ಕಾರ್ಯವನ್ನು ಮಾಡುತ್ತಿದೆ. ಫಲಾನುಭವಿಗಳು ಸರಕಾರದ ಸವಲತ್ತುಗಳ ಪ್ರಯೋಜನ ಪಡೆದು, ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಜಾಲು, ಜಪ್ಪಿನಮೊಗರು ಸೇರಿದಂತೆ ಆಸುಪಾಸಿನ ವಿವಿಧ ಗ್ರಾಮಗಳ 75 ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಚೆಕ್‌ಗಳನ್ನ ಹಾಗೂ 30 ಮಂದಿಗೆ ಪಿಂಚಣಿ ಆದೇಶ ಪತ್ರವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಮನಪಾ ಸದಸ್ಯರಾದ ಅಪ್ಪಿ, ಸುರೇಂದ್ರ, ಪ್ರೇಮಾನಂದ ಶೆಟ್ಟಿ ಹಾಗೂ ಶೈಲಜಾ, ಟಿ.ಕೆ.ಸುಧೀರ್ ನವಾಝ್, ಸದಾಶಿವ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News