×
Ad

​ನೋ ಬಾಲ್ ಎಫೆಕ್ಟ್: ಟ್ರಾಫಿಕ್ ನಿಯಂತ್ರಣಕ್ಕೆ ಬುಮ್ರಾ ಫೋಟೋ ಬಳಸಿದ ಜೈಪುರ ಪೊಲೀಸ್!

Update: 2017-06-24 12:44 IST

ಜೈಪುರ, ಜೂ.24: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ತಾವು ಎಸೆದ ನೋಬಾಲ್ ಚಿತ್ರವನ್ನು ರಸ್ತೆ ಸುರಕ್ಷತೆಯ ಅಭಿಯಾನಕ್ಕೆ ಬಳಸಿಕೊಂಡ ಜೈಪುರ ಟ್ರಾಫಿಕ್ ಪೊಲೀಸರ ನಿರ್ಧಾರ ಕ್ರಿಕೆಟಿಗ ಜಸ್‌ಪ್ರೀತ್ ಬುಮ್ರಾ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರಾಫಿಕ್ ಪೊಲೀಸರ ಹೋರ್ಡಿಂಗ್ ನಲ್ಲಿ ಗೆರೆಯ ಹಿಂದೆ ಎರಡು ಕಾರುಗಳು ಹಾಗೂ ಇನ್ನೊಂದು ಬದಿಯಲ್ಲಿ ಬುಮ್ರಾ ನೋಬಾಲ್ ದೃಶ್ಯ, ಜತೆಗೆ ಈ ಅಡಿ ಬರಹ ‘‘ಗೆರೆ ದಾಟಬೇಡಿ, ಅದು ದುಬಾರಿಯಾಗಬಹುದು ಎಂದು ನಿಮಗೆ ಗೊತ್ತು.’’ ಆದರೆ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗಿರುವ ಬುಮ್ರಾ ಅವರಿಗೆ ಈ ಚಿತ್ರ ತಮಾಷೆಯಾಗಿ ಕಂಡುಬಂದಿಲ್ಲ. ಟ್ವಿಟ್ಟರಿನಲ್ಲಿ ಪ್ರತಿಕ್ರಿಯಿಸಿದ ಅವರು ‘‘ವೆಲ್ ಡನ್ ಜೈಪುರ್ ಟ್ರಾಫಿಕ್ ಪೊಲೀಸ್, ನಮ್ಮ ದೇಶಕ್ಕಾಗಿ ನಮ್ಮಿಂದಾದಷ್ಟು ಪ್ರಯತ್ನಿಸಿದ ಬಳಿಕ ನಮಗೆಷ್ಟು ಗೌರವ ಸಿಗುತ್ತದೆಯೆಂದು ಇದು ತೋರಿಸಿದೆ’’ ಎಂದು ಬರೆದಿದ್ದಾರೆ. ಮುಂದುವರಿದು ‘‘ಚಿಂತೆ ಬೇಡ, ನೀವು ನಿಮ್ಮ ಕರ್ತವ್ಯದಲ್ಲಿ ಮಾಡುವ ತಪ್ಪುಗಳ ಬಗ್ಗೆ ನಾನು ತಮಾಷೆ ಮಾಡುವುದಿಲ್ಲ, ಮಾನವರು ತಪ್ಪುಗಳನ್ನು ಮಾಡುತ್ತಾರೆಂದು ನನಗೆ ತಿಳಿದಿದೆ’’ ಎಂದು ಬರೆದಿದ್ದಾರೆ.

ಟ್ರಾಫಿಕ್ ಸಿಗ್ನಲ್ ಸಮೀಪ ಗೆರೆಗಳ ಹಿಂದೆ ನಿಲ್ಲುವಂತೆ ಚಾಲಕರಿಗೆ ಎಚ್ಚರಿಸುವ ಸಲುವಾಗಿ ಪಾಕಿಸ್ತಾನದ ಫೈಸಲಾಬಾದ್ ಇಲ್ಲಿನ ಟ್ರಾಫಿಕ್ ಪೊಲೀಸರು ಕೂಡ ಬುಮ್ರಾ ಫೋಟೋ ಬಳಸುತ್ತಿದ್ದಾರೆ.

ಐಸಿಸಿ ಚಾಂಪಿಯನ್ಸ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಫಖರ್ ಝಮಾನ್ ಅವರ ಸ್ಕೋರ್ 3 ರನ್ ಆಗಿರುವಾಗಲೇ ಬುಮ್ರಾ ಎಸೆದ ಚೆಂಡು ಧೋನಿ ಅವರಿಂದ ಕ್ಯಾಚ್ ಹಿಡಿಯಲ್ಪಟ್ಟಿದ್ದರೂ ನಂತರ ಅಂಪೈರ್ ರಿ-ಪ್ಲೇ ವೀಕ್ಷಿಸಿ ನೋ ಬಾಲ್ ಸಿಗ್ನಲ್ ನೀಡಿದ್ದರು. ಈ ರೀತಿ ಬಚಾವಾದ ಝಮನ್ ನಂತರ 111 ರನ್ ಸಿಡಿಸಿದ್ದು, ಭಾರತದ ಪಾಲಿಗೆ ಭಾರೀ ದುಬಾರಿಯಾಗಿ ಪರಿಣಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News