×
Ad

ಉಡುಪಿಯ ಈ ಶಾಲೆಯಲ್ಲಿ ಈದ್‌ಗೆ ಮೆಹೆಂದಿ ಹಚ್ಚುವುದಕ್ಕೆ ನಿಷೇಧ

Update: 2017-06-24 13:14 IST

ಉಡುಪಿ, ಜೂ.24: ಈದ್ ಫಿತ್ರ್ ಗೆ ಮಕ್ಕಳು ಮೆಹೆಂದಿ ಹಚ್ಚಿಕೊಳ್ಳುವುದನ್ನು ನಿಷೇಧಿಸಿರುವ ಮತ್ತು ದಂಡ ವಿಧಿಸುವ ಉಡುಪಿಯ ಖಾಸಗಿ ಶಾಲೆಯೊಂದರ ಕ್ರಮವು ಪೋಷಕರು ಹಾಗೂ ವಿವಿಧ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಶಾಲೆಯಿಂದ ಪೋಷಕರಿಗೆ ಕಳುಹಿಸಲಾದ ಮೊಬೈಲ್ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಉಡುಪಿ ಸೈಲಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಮಕ್ಕಳ ಪೋಷಕರಿಗೆ ಕಳುಹಿಸಲಾದ ಮೊಬೈಲ್ ಸಂದೇಶದಲ್ಲಿ ‘ಈದ್ ಪ್ರಯುಕ್ತ ಜೂ.26ರಂದು ಶಾಲೆಗೆ ರಜೆ ನೀಡಲಾಗಿದೆ. ಮೆಹೆಂದಿ ಹಾಕುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮೆಹೆಂದಿ ಹಾಕಿಕೊಂಡು ಬರುವವರಿಗೆ 300 ರೂ. ದಂಡ ವಿಧಿಸಲಾಗುವುದು’ ಎಂದು ಹೇಳಿದೆ.

 ಇದೀಗ ಸಂದೇಶವು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದ್ದು, ತೀವ್ರ ಅಸಮಾಧಾನ ವ್ಯಕ್ತವಾಗಿದೆ. ‘ಜಿಲ್ಲೆಯ ಯಾವುದೇ ಶಾಲೆಗಳಲ್ಲಿ ಇಲ್ಲದ ನಿಯಮವನ್ನು ಈ ಶಾಲೆ ಜಾರಿ ತಂದು ಮಕ್ಕಳ ಸಂತೋಷವನ್ನು ಕಸಿಯಲಾಗುತ್ತಿದೆ. ಹಬ್ಬದ ದಿನ ಹೆಣ್ಣು ಮಕ್ಕಳು ಮೆಹೆಂದಿ ಹಚ್ಚಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಈ ಶಾಲೆಯ ಮಕ್ಕಳು ಅದರಿಂದ ವಂಚಿತರಾಗಿದ್ದಾರೆ ಎಂದು ಪೋಷಕರು ‘ವಾರ್ತಾಭಾರತಿ’ಯೊಂದಿಗೆ ದೂರಿದ್ದಾರೆ.

ಸಂಘಟನೆಗಳ ಆಕ್ರೋಶ
‘ಶಾಲೆಯ ಈ ಕ್ರಮ ಸರಿಯಲ್ಲ. ಇದು ಮುಸ್ಲಿಮರ ಸಂಸ್ಕೃತಿಯ ಮೇಲಿನ ದಬ್ಬಾಳಿಕೆಯಾಗಿದೆ. ಮೆಹೆಂದಿ ಹಚ್ಚದಂತೆ ಮಕ್ಕಳ ಮೇಲೆ ಮಾನಸಿಕವಾಗಿ ಒತ್ತಡ ಹಾಕುವ ಕೆಲಸ ಮಾಡಲಾಗುತ್ತಿದೆ. ಮೆಹೆಂದಿ ಹಬ್ಬದ ಸಂತೋಷದ ಒಂದು ಭಾಗವಾಗಿದೆ. ಇದನ್ನು ಶಾಲೆಯಲ್ಲಿ ನಿಷೇಧಿಸಿರುವುದು ತಪ್ಪು. ಕೆಲವು ವಿದ್ಯಾ ಸಂಸ್ಥೆಗಳಲ್ಲಿ ಹಿಂದೆ ಬುರ್ಖಾ, ಈಗ ಮೆಹೆಂದಿ ನಿಷೇಧಿಸುವ ಕೆಲಸ ನಡೆಯುತ್ತಿದೆ’ ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಶನ್‌ನ ಉಡುಪಿ ಜಿಲ್ಲಾಧ್ಯಕ್ಷ ಶುಐಬ್ ಮಲ್ಪೆ ಟೀಕಿಸಿದ್ದಾರೆ.

ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಮಕ್ಕಳ ಸಂತೋಷಕ್ಕೆ ವಿರುದ್ಧವಾದ ಕ್ರಮ. ಆದುದರಿಂದ ಶಾಲಾ ಆಡಳಿತ ಮಂಡಳಿಯು ಇದನ್ನು ಕೂಡಲೇ ಕೈಬಿಡಬೇಕು. ಈದ್ ಹಬ್ಬದಲ್ಲಿ ಎಲ್ಲ ಮಕ್ಕಳಿಗೆ ಮೆಹೆಂದಿ ಹಚ್ಚಿಕೊಳ್ಳಲು ಅವಕಾಶ ನೀಡಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಒತ್ತಾಯಿಸಿದೆ.
‘ಮೆಹೆಂದಿ ಹಚ್ಚಿಕೊಳ್ಳುವುದಕ್ಕೆ ನಮ್ಮ ಸಂಸ್ಥೆಯಲ್ಲಿ ನಿಷೇಧವಿದೆ. ಆದರೆ ಈದ್ ಗೆ ಯಾವುದೇ ನಿಷೇಧ ಹೇರಿಲ್ಲ. ಹಬ್ಬದ ಸಂತೋಷ ಆಚರಣೆಯಲ್ಲಿ ಮೆಹೆಂದಿ ಹಚ್ಚಿಕೊಳ್ಳುವುದಕ್ಕೆ ನಮ್ಮದು ಯಾವುದೇ ವಿರೋಧ ಇಲ್ಲ’ ಎಂದು ಉಡುಪಿ ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ಫಾ. ಅನಿಲ್ ಡಿಕೋಸ್ತ ತಿಳಿಸಿದ್ದಾರೆ.

ಮೆಹೆಂದಿ ಯಾವ ಸಮಯದಲ್ಲಿ ಹಚ್ಚಬೇಕು ಮತ್ತು ಹಚ್ಚಬಾರದು ಎಂಬುದು ಇಸ್ಲಾಮಿನಲ್ಲಿ ನಿಯಮವಿದೆ. ಅದನ್ನು ಅವರು ಪಾಲಿಸುತ್ತಾರೆ. ಅದುಬಿಟ್ಟು ವಿದ್ಯಾ ಸಂಸ್ಥೆ ಅದನ್ನು ಮಕ್ಕಳ ಮೇಲೆ ಹೇರುವ ಮೂಲಕ ಧಾರ್ಮಿಕ ಹಾಗೂ ವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಸಂಘಟನಾ ಕಾರ್ಯದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ತಿಳಿಸಿದ್ದಾರೆ.

ಶಾಲಾ ಪ್ರಾಂಶುಪಾಲರ ಸ್ಪಷ್ಟನೆ
‘ನಮ್ಮ ಶಾಲೆ ಆರಂಭವಾದ 15 ವರ್ಷಗಳಿಂದ ಈ ನಿಯಮ ಇದೆ. ಯಾರೂ ಕೂಡ ಮೆಹೆಂದಿ ಹಚ್ಚಿಕೊಂಡು ಬರಬಾರದು. ಇದನ್ನು ಸ್ಕೂಲ್ ಡೈರಿಯಲ್ಲೇ ಉಲ್ಲೇಖಿಸಲಾಗಿದೆ. ಇದೀಗ ಈದ್ ಗೂ ಈ ನಿಯಮ ಅನ್ವಯವಾಗಲಿದೆ. ಮನೆಯಲ್ಲಿನ ಮದುವೆ ಸಮಾರಂಭಕ್ಕೆ ಮೆಹೆಂದಿ ಹಾಕಬೇಕಿದ್ದರೆ ಪೋಷಕರು ಪ್ರಾಂಶುಪಾಲರಿಗೆ ಪತ್ರ ಬರೆದುಕೊಡಬೇಕು. ಆಗ ಅವಕಾಶ ಕೊಡುತ್ತೇವೆ’ ಎಂದು ಉಡುಪಿ ಸೈಲಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಪ್ರಾಂಶುಪಾಲೆ ಡಿಯೆಡ್ರಾ ಎಸ್. ಮಾಬೆನ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News