ಸರ್ವ ಧರ್ಮಿಯರ ಹಬ್ಬಗಳು ಸೌಹಾರ್ಧತೆಯಿಂದ ನಡೆಯಬೇಕು: ಶಶಿಧರ್
ಮೂಡಿಗೆರೆ, ಜೂ.24: ರಮಝಾನ್ ಹಬ್ಬ ಮುಸ್ಲಿಂ ಬಾಂಧವರಿಗೆ ಸಮಾನತೆಯ ಹಬ್ಬವಾಗಿದ್ದು, ಸೌಹಾರ್ಧತೆಯಿಂದ ಹಬ್ಬ ಆಚರಿಸಿ ಎಲ್ಲ ಧರ್ಮಿಯರು ಅನ್ಯೋನತೆಯ ಭಾವದಲ್ಲಿ, ಸೋದರತೆಯಿಂದ ಕಂಡು ಶಾಂತಿಯಿಂದ ಮುಸ್ಲಿಂ ಭಾಂದವರು ಹಬ್ಬಆಚರಿಸಬೇಕೆಂದು ಬಣಕಲ್ ಎಎಸೈ ಶಶಿಧರ್ ಹೇಳಿದರು.
ಅವರು ಬಣಕಲ್ ಪೊಲೀಸ್ ಠಾಣೆಯಲ್ಲಿ ರಮಝಾನ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಬಣಕಲ್‌ನಲ್ಲಿ ಸರ್ವ ಧರ್ಮಿಯರು ಉತ್ತಮ ಭಾಂದವ್ಯ ಹೊಂದಿದ್ದಾರೆ. ಆದರೆ ಹಬ್ಬದ ಆಚರಣೆಯಲ್ಲಿ ಕೆಲವು ಗೊಂದಲಗಳು ಬರಬಹುದು. ಅದನ್ನು ಶಾಂತಿಯಿಂದ ಬಗೆಹರಿಸಬೇಕು.ಸಮಸ್ಯೆಗಳಿದ್ದಲ್ಲಿ ಪೋಲಿಸರಿಗೆ ಮೊದಲು ತಿಳಿಸಿ ಸಮಸ್ಯೆ ಪರಿಹರಿಸಲು ಸಹಕರಿಸಬೇಕು. ಕಾನೂನು ಚೌಕಟ್ಟಿನ ಒಳಗೆ ಹಬ್ಬದ ಮಿತಿಯಿರಬೇಕು. ಬೇರೆ ಧರ್ಮಿಯರಿಗೆ ತೊಂದರೆಯಾಗದಂತೆ ಹಬ್ಬದ ಆಚರಣೆಯಾಗಬೇಕು ಎಂದು ತಿಳಿಸಿದರು.
ಬಣಕಲ್ ಪೋಲಿಸ್ ಮುಖ್ಯ ಪೇದೆ ರುದ್ರೇಶ್ ಮಾತನಾಡಿ, ಬಣಕಲ್ ಪಟ್ಟಣದಲ್ಲಿ ರಮಝಾನ್ ಹಬ್ಬ ಶಾಂತಿಯುತವಾಗಿ ಪ್ರತಿವರ್ಷವೂ ನಡೆದುಕೊಂಡು ಬಂದಿದೆ. ಆದರೆ ಗಡಿಭಾಗದ ಜಿಲ್ಲೆಯಲ್ಲಿ ಸ್ವಲ್ಪ ಸಮಸ್ಯೆಗಳು ಉದ್ಭವಿಸಿವೆ. ಶಾಂತಿಗೆ ಭಂಗ ಉಂಟಾಗಿದೆ. ಹಾಗಿರುವಾಗ ಇದು ಪ್ರವಾಸಿಗರ ತಾಣವಾಗಿರುವುದರಿಂದ ಹೊರಗಿನಿಂದ ಬಂದವರು ಸಣ್ಣಪುಟ್ಟ ತೊಂದರೆ ಮಾಡಿದರೆ ಹಬ್ಬದ ಆಚರಣೆಗೆ ಸಮಸ್ಯೆಯಾಗಬಹುದು. ಹಾಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮಹಾಮ್ಮಾಯಿ ಸೇನೆಯ ಯುವ ಮುಖಂಡ ವಿನಯ್ ಮಾತನಾಡಿ, ಕಳೆದ ಬಾರಿ ಹಿಂದು ಧರ್ಮಿಯರಿಗೆ ಧಾರ್ಮಿಕ ಆಚರಣೆಯ ಮೆರವಣಿಗೆ ಸಮಯದಲ್ಲಿ ದ್ವನಿವರ್ಧಕ ಮತ್ತು ಡಿ.ಜೆ ನೀಡಿರಲಿಲ್ಲ. ಆದರೆ ಮುಸ್ಲಿಂ ಭಾಂದವರಿಗೆ ಪೋಲಿಸರೇ ಚಕ್ಕಮಕ್ಕಿಯಿಂದ ಡಿಜೆ ಮೆರವಣಿಗೆಯಲ್ಲಿ ಸಾಗಲು ಅವಕಾಶ ನೀಡಿದ್ದರು. ಮೆರವಣಿಗೆಯಲ್ಲಿ ದ್ವನಿವರ್ಧಕ ಬಳಕೆ ಬಗ್ಗೆ ಮೂಡಿಗೆರೆಗೆ ಒಂದು ನೀತಿ ಬಣಕಲ್ ಗ್ರಾಮಕ್ಕೆ ಒಂದು ನೀತಿ ಪೋಲಿಸರು ಅನುಸರಿಸುತ್ತಿದ್ದಾರೆ. ಈ ರೀತಿಯ ತಾರತಮ್ಯ ಸಲ್ಲದು. ಸರ್ವ ಧರ್ಮದವರಿಗೂ ಅವರ ಆಚರಣೆಯಲ್ಲಿ ಸಮಾನ ನೀತಿಯನ್ನು ಅನುಸರಿಸಬೇಕೆಂದು ಅವರು ಪೋಲಿಸರೊಂದಿಗೆ ಮನವಿ ಮಾಡಿದರು.
ಶಾಂತಿ ಸಭೆಯಲ್ಲಿ ಮುಸ್ಲಿಂನ ಮುಖ್ಯಸ್ಥ ಮಹಮ್ಮದ್ ಆಲಿ, ಬಿಜೆಪಿ ಪಕ್ಷದ ಮುಖಂಡರಾದ ಅನಿಲ್‌ಕುಮಾರ್, ಟಿ.ಎಂ.ಗಜೇಂದ್ರ, ಮಹೇಂದ್ರ ಕೊಟ್ಟಿಗೆಹಾರ, ಮಹಮ್ಮಾಯಿ ಸೇನೆಯ ವಿನಯ್, ಚಂದ್ರಯ್ಯ, ಮಂಜಯ್ಯ, ಮುಸ್ಲಿಂ ಭಾಂದವರಾದ ತೌಫಿಕ್‌ಅಹಮ್ಮದ್, ಶಕೀಲ್, ಇರ್ಪಾನ್, ತಾಹೇರ್, ತಫಜಲ್ ಹುಸೈನ್, ಪೊಲೀಸ್ ಸಿಬ್ಬಂದಿಗಳಾದ ಲೋಕೇಶ್, ಪಾಂಡು, ಯೋಗೀಶ್ ಮತ್ತಿತರಿದ್ದರು.