×
Ad

ಹೊಸ ಬಟ್ಟೆ ತಂದಿಟ್ಟಾಗಲೇ ಪೆರ್ನಾಳ್ ಸಂಭ್ರಮ

Update: 2017-06-24 15:37 IST

ನನಗೆ ಬಾಲ್ಯದಲ್ಲೇ ತಿನ್ನುವ ಚಪಲ. ಶಾಲೆಯ ಪಕ್ಕದಲ್ಲೇ ನನ್ನ ಅಪ್ಪನ ಹೊಟೇಲ್‌ಇತ್ತು. ಹಾಗಾಗಿ ನನ್ನ ಚಪಲಕ್ಕೆ ಅದು ಸಹಕಾರಿ ಯಾಗುತ್ತಿತ್ತು. ಹಾಗಂತ ನಾನು ಉಪವಾಸ ಅಂದರೆ ದೂರ ಸರಿದವಳಲ್ಲ. ಮನೆಯವರೇ ಸಣ್ಣ ವಯಸ್ಸಿನಲ್ಲಿ ಬೇಡ ಎಂದು ನನ್ನನ್ನು ಉಪವಾಸ ದಿಂದ ತಡೆಹಿಡಿಯುತಿದ್ದರು. ಉಪವಾಸ ಹಿಡಿದರೆ ಮಾತ್ರ ಪೆರ್ನಾಳ್ ಹಬ್ಬಕ್ಕೊಂದು ಮಜ ಇದೆ ಎಂದು ನನಗೆ ಅನಿಸಿತ್ತು. ಹಾಗಾಗಿ ನಾನು ಉಪವಾಸ ಹಿಡಿಯಲು ಹಠ ಕಟ್ಟುತ್ತಿದ್ದೆ. ಅದರಂತೆ ವಾರಕ್ಕೊಂದು ಉಪವಾಸ ಹಿಡಿಯಲು ಅವಕಾಶ ಸಿಗುತ್ತಿತ್ತು.

10 ಉಪವಾಸ ಕಳೆಯುತ್ತಲೇ ಹೊಸ ಬಟ್ಟೆ ಖರೀದಿಯ ಜೋಸು. ಅಪ್ಪ ಯಾವಾಗ ಹೊಸ ಬಟ್ಟೆ ತರುತ್ತಾರೆ ಎಂಬ ಪ್ರಶ್ನೆ, ಗೆಳತಿಯರಿಗೆ ಹೊಸ ಬಟ್ಟೆ ಬಂತಾ ಎಂಬ ತಳಮಳ. ದಿನ ಉರುಳುತ್ತಲೇ ಹೊಸ ಬಟ್ಟೆ ತೆಗೆಯಿರಿ ಎಂದು ಅಬ್ಬ-ಉಮ್ಮನನ್ನು ಪೀಡಿಸುವುದು ಸಾಮಾನ್ಯವಾಗಿತ್ತು.

ಹೊಸ ಬಟ್ಟೆ ತಂದಾಗ, ಅದನ್ನು ಧರಿಸಿ ಅಂದೇ ಪೆರ್ನಾಳ್ ಆಚರಿಸಿದಷ್ಟು ಸಂಭ್ರಮ. ಪೆರ್ನಾಳ್ ನಂದು ತಂದೆ-ಅಣ್ಣ ಹೊಸ ಬಟ್ಟೆ ಧರಿಸಿ ಮಸೀದಿಗೆ ಹೋಗುವುದನ್ನು ಮತ್ತು ತಾಯಿ, ಅಕ್ಕಂದಿರು ಹೊಸ ಬಟ್ಟೆ ಧರಿಸುವುದನ್ನು ನೋಡುವುದೇ ಖುಷಿ. ಎಲ್ಲರೂ ಜೊತೆಯಾಗಿ ನೈಚೋರು, ಪತ್ತಿರ್, ದೋಸೆ, ಆಡು, ಕೋಳಿ ಮಾಂಸದ ಪದಾರ್ಥ ಹೀಗೆ ಎಲ್ಲವನ್ನೂ ತಿನ್ನುವುದು ಇನ್ನಿಲ್ಲದ ಖುಷಿ.

ಏನು ತಪ್ಪು ಮಾಡಿದರೂ ಆವತ್ತಿನ ಮಟ್ಟಿಗೆ ಮಾಫಿ ಎಂಬ ಹುಸಿ ನಂಬಿಕೆ. ಸಂಜೆಯಾಗುತ್ತಲೇ ಪೆರ್ನಾಳ್ ಮುಗಿಯಿತಲ್ಲಾ ಎಂಬ ಬೇಸರ. ಹೊಸ ಪೆರ್ನಾಳ್‌ಗೆ ಇನ್ನೊಂದು ವರ್ಷ ಕಾಯಬೇಕಲ್ಲಾ ಎಂಬ ನೋವು. ಒಟ್ಟಿನಲ್ಲಿ ಪೆರ್ನಾಳ್ ಮರೆಯಲಾಗದ ಸವಿ ನೆನಪು.

Writer - ಶಮೀಮಾ ಕುತ್ತಾರ್ (ಲೇಖಕಿ)

contributor

Editor - ಶಮೀಮಾ ಕುತ್ತಾರ್ (ಲೇಖಕಿ)

contributor

Similar News