×
Ad

ಮಧ್ಯಪ್ರದೇಶ : ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣು

Update: 2017-06-24 18:26 IST

ಭೋಪಾಲ್, ಜೂ.24: ಮಧ್ಯಪ್ರದೇಶದಲ್ಲಿ ಮತ್ತೋರ್ವ ರೈತ ಆತ್ಮಹತ್ಯೆಗೆ ಶರಣಾಗುವುದರೊಂದಿಗೆ ಜೂನ್ 6ರಂದು ಮಂದ್‌ಸೋರ್‌ನಲ್ಲಿ ನಡೆದ ರೈತರ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಸಂಖ್ಯೆ 22 ಕ್ಕೇರಿದೆ.

  ಬುಂದೇಲ್‌ಖಂಡ್ ಪ್ರದೇಶದ ಪಾಲಿ ಗ್ರಾಮದ ರಘುವೀರ್ ಯಾದವ್ (28 ವರ್ಷ) ಗುರುವಾರ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ತನ್ನ ಹೊಲದಲ್ಲಿ ಸಲ್ಫಾಸ್ ಮಾತ್ರೆಗಳನ್ನು ಸೇವಿಸಿದ್ದಾನೆ. ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಗ್ವಾಲಿಯರ್‌ನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅಷ್ಟರಲ್ಲೇ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

 ಈತ 10 ಲಕ್ಷ ರೂ.ಗಿಂತಲೂ ಹೆಚ್ಚು ಸಾಲ ಮಾಡಿದ್ದು ಇದನ್ನು ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಘುವೀರ್ ಯಾದವ್ ತಂದೆ ದೇಶ್‌ಪಥ್ ಯಾದವ್ ಹೇಳಿದ್ದಾರೆ. ಆದರೆ ಕುಟುಂಬದೊಳಗಿನ ವಿವಾದದ ಹಿನ್ನೆಲೆಯಲ್ಲಿ ರಘುವೀರ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಸ್ತಿಯ ವಿಷಯದಲ್ಲಿ ತನ್ನ ಪುತ್ರರಾದ ರಘುವೀರ್ ಮತ್ತು ಮುನೀಷ್ ಯಾದವ್ ತನ್ನೊಡನೆ ತಗಾದೆ ತೆಗೆಯುತ್ತಿದ್ದು ಆಸ್ತಿ ಪಾಲು ಮಾಡಿಕೊಡದಿದ್ದರೆ ತನ್ನನ್ನು ಮನೆಯಿಂದ ಹೊರಗೆ ತಳ್ಳುವುದಾಗಿ ಪುತ್ರರು ಬೆದರಿಸಿದ್ದಾರೆ ಎಂದು ದೇಶ್‌ಪಥ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಅದರ ಮರುದಿನ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತರರ ಹೊಲಗಳನ್ನು ಗುತ್ತಿಗೆಗೆ ಪಡೆದು ಕೃಷಿ ಬೆಳೆಯುತ್ತಿದ್ದ ರಘುವೀರ್ ಕೃಷಿ ಚಟುವಟಿಕೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News