ರಾಷ್ಟ್ರಭಾಷೆ ಹಿಂದಿಯ ಕಲಿಕೆ ಮುಖ್ಯ: ನಾಯ್ಡು
ಅಹ್ಮದಾಬಾದ್,ಜೂ.24: ದೇಶದಲ್ಲಿಯ ಹೆಚ್ಚಿನ ಜನರು ಹಿಂದಿ ಭಾಷಿಕರಾಗಿರುವು ದರಿಂದ ರಾಷ್ಟ್ರಭಾಷೆ ಹಿಂದಿಯನ್ನು ಕಲಿಯುವುದು ಮುಖ್ಯವಾಗಿದೆ ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಶನಿವಾರ ಇಲ್ಲಿ ಹೇಳಿದರು.
ಮಾತೃಭಾಷೆಯ ಉತ್ತೇಜನಕ್ಕೂ ಒತ್ತು ನೀಡಿದ ಅವರು, ದೇಶದಲ್ಲಿ ಇಂಗ್ಲಿಷ್‌ಗೆ ಅತಿಯಾದ ಮಹತ್ವ ನೀಡಲಾಗಿದೆ ಎಂದು ವಿಷಾದಿಸಿದರು.
ಇಲ್ಲಿಯ ಸಾಬರಮತಿ ಆಶ್ರಮದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,ರಾಷ್ಟ್ರಭಾಷೆಯಾಗಿ ಹಿಂದಿ ತುಂಬ ಮುಖ್ಯವಾಗಿದೆ. ಅದು ನಮಗೆ ಅತ್ಯಗತ್ಯವಾಗಿದೆ. ಹೀಗಾಗಿ ಹಿಂದಿ ಕಲಿಕೆಯೂ ಮುಖ್ಯವಾಗಿದೆ. ಆದರೆ ನಾವು ನಮ್ಮ ಮಾತೃಭಾಷೆಗಳಲ್ಲಿಯೂ ಪ್ರಭುತ್ವ ಹೊಂದಿರಬೇಕು ಎಂದರು.
ಇದೇ ವೇಳೆ ಇಂಗ್ಲಿಷ್‌ನಲ್ಲಿ ಮಹಾತ್ಮಾಗಾಂಧಿಯವರ ಸಂಗ್ರಹಿತ ಲೇಖನಗಳ 100 ಸಂಪುಟಗಳನ್ನು ಆಶ್ರಮಕ್ಕೆ ಉಡುಗೊರೆಯಾಗಿ ನೀಡಿದ ಅವರು, ಈ ಸಂಪುಟಗಳನ್ನು ಎಲ್ಲ ಭಾರತೀಯ ಭಾಷೆಗಳಲ್ಲಿ ತರಬೇಕಾಗಿದೆ ಎಂದರು.
ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆಯು ತುಂಬ ಅಗತ್ಯವಾಗಿದೆ. ಆದ್ದರಿಂದ ನಮ್ಮ ಮಾತೃಭಾಷೆಯಲ್ಲಿ ಕಲಿಕೆಯೂ ತುಂಬ ಅಗತ್ಯವಾಗಿದೆ. ನಮ್ಮ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯ ಉತ್ತೇಜನಕ್ಕೆ ಪ್ರಾಮುಖ್ಯ ನೀಡಬೇಕು ಎಂದು ನಾನು ಬಯಸಿದ್ದೇನೆ. ದುರ್ದೈವವಶಾತ್ ನಾವು ಇಂಗ್ಲೀಷ್ ಮಾಧ್ಯಮಕ್ಕೆ ಅತಿಯಾದ ಮಹತ್ವ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.