ಜೂನ್ ಒಳಗೆ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಿ: ದಿನಕರ ಬಾಬು

Update: 2017-06-24 15:17 GMT
Editor : ಸೂಚನೆ

ಉಡುಪಿ, ಜೂ.24: ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳಿಗೆ ಜೂನ್ ತಿಂಗಳ ಕೊನೆಯೊಳಗೆ ಶಾಲಾ ಸಮವಸ್ತ್ರಗಳನ್ನು ವಿತರಿಸುವಂತೆ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಣಿಪಾಲ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಪಂನ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡುವ ಸಮಯದಲ್ಲಿ ಒಂದೇ ಬಣ್ಣದ, ಉತ್ತಮ ಗುಣಮಟ್ಟದ ಸಮವಸ್ತ್ರ ವಿತರಿಸುವಂತೆ ಹಾಗೂ ಎಲ್ಲಾ ಮಕ್ಕಳಿಗೂ ಶೂ ವಿತರಿಸುವಂತೆ ಡಿಡಿಪಿಐ ಅವರಿಗೆ ಅಧ್ಯಕ್ಷರು ಸೂಚಿಸಿದರು.

ಕಾರ್ಕಳದಲ್ಲಿ ಇತ್ತೀಚೆಗೆ 4 ದಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಮೆಸ್ಕಾಂ ಕಾರ್ಯವೈಖರಿ ಬಗ್ಗೆ ಸದಸ್ಯೆ ದಿವ್ಯಶ್ರೀ ಅಮೀನ್ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿಗಳು ಮಳೆಗಾಲದಲ್ಲಿ ಮರ ಬಿದ್ದು ಈ ಸಮಸ್ಯೆ ಆಗಿದ್ದು, ತೆರವುಗೊಳಿಸುವಲ್ಲಿ ವಿಳಂಬವಾಗಿದೆ ಎಂದರು. ಮಳೆಗಾಲ ದಲ್ಲಿ ಈ ರೀತಿಯ ಸಮಸ್ಯೆಗಳು ಎದುರಾದಾಗ ತುರ್ತು ಕಾರ್ಯನಿರ್ವಹಿಸಲು ವಿಶೇಷ ತಂಡವನ್ನು ಸಿದ್ದಗೊಳಿಸಿ ಇಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.


ಬ್ರಹ್ಮಾವರ ತಾಲೂಕು ರಚನೆ ಸಂದರ್ಭದಲ್ಲಿ ಮೂಡುತೋನ್ಸೆ, ಪಡುತೋನ್ಸೆ ಗ್ರಾಮಗಳನ್ನು ಉಡುಪಿ ತಾಲೂಕಿನಲ್ಲೇ ಉಳಿಸಿಕೊಳ್ಳುವಂತೆ ಜನಾರ್ದನ ತೋನ್ಸೆ ಮನವಿ ಮಾಡಿದರು. ಹೆಬ್ರಿ ಪೊಲೀಸ್ ಠಾಣೆ ಅತ್ಯಂತ ಹಳೆಯದಾಗಿದ್ದು, ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಆಯುಧಗಳನ್ನು ಇಡಲು ಪ್ರತ್ಯೇಕ ಕೊಠಡಿ, ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ಸೌಲ್ಯ ಇಲ್ಲ. ಸಾರ್ವಜನಿಕರಿಗೆ ಸಹ ಕೂರಲು ವ್ಯವಸ್ಥೆಯಿಲ್ಲ. ಆದ್ದರಿಂದ ಹೊಸ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ನಿರ್ಣಯ ಮಾಡಿ ಕಳುಹಿಸುವಂತೆ ಸದಸ್ಯೆ ಜ್ಯೋತಿ ಹರೀಶ್ ಕೋರಿದರು.
 
 
ಶಿರ್ವದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಹಾಸ್ಟೆಲ್ ಇಲ್ಲವಾಗಿದ್ದು, ಹೊಸ ಹಾಸ್ಟೆಲ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸದಸ್ಯ ವಿಲ್ಸನ್ ರಾಡ್ರಿಗಸ್ ವಿನಂತಿಸಿದರು. ಶಾಲಾ ಸಾಮಗ್ರಿ ಖರೀದಿ ಅನುದಾನವನ್ನು ಶಿಕ್ಷಕರು ಕಡಿಮೆ ಇರುವ ಶಾಲೆಗಳಲ್ಲಿ ಇ ಕ್ಲಾಸ್ ಪ್ರಾರಂಭಿಸಲು ಉಪಯೋಗಿಸುವಂತೆ ಡಿಡಿಪಿಐ ಅವರಿಗೆ ಜಿಲ್ಲಾಧಿಕಾರಿ ತಿಳಿಸಿದರು.
 

Writer - ಸೂಚನೆ

contributor

Editor - ಸೂಚನೆ

contributor

Similar News