ಪಾಸ್‌ಪೋರ್ಟ್ ಸೇವಾ ಕೇಂದ್ರ ಶೀಘ್ರ ಪ್ರಾರಂಭ: ಶೋಭಾ ಕರಂದ್ಲಾಜೆ

Update: 2017-06-24 16:23 GMT

ಉಡುಪಿ, ಜೂ.24: ಜಿಲ್ಲೆಯ ಜನತೆಯ ಅನುಕೂಲಕ್ಕಾಗಿ ಉಡುಪಿಯಲ್ಲಿ ಹೊಸ ಪಾಸ್‌ಪೋರ್ಟ್ ಸೇವಾ ಕೇಂದ್ರವೊಂದು ಉಡುಪಿ ಪ್ರಧಾನ ಅಂಚೆಕಚೇರಿ ವ್ಯಾಪ್ತಿಯಲ್ಲಿ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿ ಪ್ರಮುಖ ಜಿಲ್ಲಾ ಕೇಂದ್ರವಾಗಿದ್ದು, ಜಗದ್ವಿಖ್ಯಾತ ಶಿಕ್ಷಣ ಸಂಸ್ಥೆಗಳು, ಪ್ರಸಿದ್ಧ ಮಠ-ಮಂದಿರಗಳು ಮತ್ತು ಹೆಸರಾಂತ ಮೀನುಗಾರಿಕಾ ಬಂದರನ್ನು ಹೊಂದಿದೆ. ಜಿಲ್ಲೆಯ ಜನ ತಮ್ಮ ಪಾಸ್‌ಪೋರ್ಟ್ ಸಂಬಂಧಿ ಕೆಲಸ- ಕಾರ್ಯಗಳಿಗೆ ದೂರದ ಮಂಗಳೂರಿಗೆ ಹೋಗಿ ತಾಸುಗಟ್ಟಲೆ ಕಾಯುವ ಪರಿಸ್ಥಿತಿ ಇದ್ದು, ಇದಕ್ಕಾಗಿ ಉಡುಪಿಯಲ್ಲಿ ಒಂದು ಹೊಸ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಸ್ಥಾಪಿಸುವಂತೆ ತಾನು ಕಳೆದ ಮಾರ್ಚ್ ತಿಂಗಳಿನಲ್ಲಿ ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ರಿಗೆ ಮನವಿ ಮಾಡಿದ್ದಾಗಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ತನ್ನ ಮನವಿಗೆ ಸ್ಪಂದಿಸಿ ಶೀಘ್ರವಾಗಿ ಉಡುಪಿ ಜಿಲ್ಲೆಗೆ ಹೊಸ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಮಂಜೂರು ಮಾಡಿರುವ ಸುಷ್ಮಾ ಸ್ವರಾಜ್‌ಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಉಡುಪಿಯ ಪ್ರಸ್ತಾವಿತ ಪಾಸ್‌ಪೋರ್ಟ್ ಸೇವಾ ಕೇಂದ್ರ, ಉಡುಪಿ ಪ್ರಧಾನ ಅಂಚೆ ಕಚೇರಿ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಸಾಧ್ಯವಾದಷ್ಟು ಶೀಘ್ರ ಇಡೀ ಜಿಲ್ಲೆಯ ಜನತೆಗೆ ಅನುಕೂಲವಾಗುವ ಸ್ಥಳದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಪ್ರಾರಂಭಿಸಲು ಅಂಚೆ ಇಲಾಖಾಧಿಕಾರಿಗಳಿಗೆ ಸೂಚಿಸಿರುವುದಾಗಿ ಸಂಸದೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News