×
Ad

ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೌಹಾರ್ದ ಇಫ್ತಾರ್ ಕೂಟ

Update: 2017-06-24 21:53 IST

ಉಡುಪಿ, ಜೂ.24: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠದ ವತಿಯಿಂದ ಇಫ್ತಾರ್ ಕೂಟವನ್ನು ಶನಿವಾರ ಪ್ರಥಮ ಬಾರಿಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಲಾಗಿತ್ತು.

ಪರ್ಯಾಯ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಕೃಷ್ಣಮಠದ ಅನ್ನಬ್ರಹ್ಮ ಭೋಜನ ಶಾಲೆಯಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು. ಸ್ವಾಮೀಜಿ ಉಪವಾಸಿಗರಿಗೆ ಖರ್ಜೂರ ನೀಡುವ ಮೂಲಕ ಇಫ್ತಾರ್‌ಗೆ ಚಾಲನೆ ನೀಡಿದರು. ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಈ ಸಂದರ್ಭದಲ್ಲಿ ಹಾಜರಿದ್ದರು.

ಮಠದಲ್ಲಿಯೇ ಆಝಾನ್ ನೀಡಿ ಉಪವಾಸ ತೊರೆಯಲಾಯಿತು. ಬಳಿಕ ಭೋಜನ ಶಾಲೆಯ ಮಹಡಿಯಲ್ಲಿ ಉಡುಪಿ ಅಂಜುಮಾನ್ ಮಸೀದಿಯ ಇಮಾಮ್ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ನಮಾಝ್ ನಿರ್ವಹಿಸಲಾಯಿತು. ಉಪವಾಸ ತೊರೆಯಲು ಫಲಾಹಾರಗಳನ್ನು ಬಳಿಕ ಗೀರೈಸ್ ದಾಲ್, ಮೊಸರನ್ನ, ಪಾಯಸ ನೀಡಲಾಯಿತು.

ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಮಾತನಾಡಿ, ಸಮಾಜದಲ್ಲಿ ಸೌಹಾರ್ದತೆ ಬೆಳೆಯಲಿ ಎಂಬ ಕೃಷ್ಣನ ಪ್ರೇರಣೆಯಂತೆ ಈ ಕೂಟವನ್ನು ಆಯೋಜಿಸಲಾಗಿದೆ. ಎಲ್ಲ ಕಡೆ ಮುಸ್ಲಿಮರು ನನಗೆ ಅಭಿಮಾನ ಪ್ರೀತಿ ತೋರಿಸುತ್ತಾರೆ. ಪರ್ಯಾಯ ಸಂದರ್ಭದಲ್ಲೂ ಕಾಣಿಕೆ ಅರ್ಪಿಸಿದ್ದಾರೆ. ರಾಮ ಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಮಧ್ಯೆ ಸೌಹಾರ್ದತೆ ಮೂಡಿಸಲು ಶಕ್ತಿ ಮೀರಿ ಪ್ರಯತ್ನ ಮಾಡಿದ್ದೆ. ಆದರೆ ರಾಜಕೀಯ ಪ್ರವೇಶದಿಂದ ಅದು ಯಶಸ್ವಿಯಾಗಿಲ್ಲ ಎಂದರು.

ಹಿಂದೂಗಳಿಗೆ ಅನ್ಯಾಯವಾದಾಗ ಮುಸ್ಲಿಮರು, ಮುಸ್ಲಿಮರಿಗೆ ಅನ್ಯಾಯವಾದಾಗ ಹಿಂದೂಗಳು ನೆರವಿಗೆ ಧಾವಿಸಬೇಕು. ಪರಸ್ಪರ ತ್ಯಾಗ ಮನೋಭಾವ ಬೆಳೆಯಬೇಕು. ಇದರಿಂದ ಸಮಾಜದಲ್ಲಿ ಸೌಹಾರ್ದತೆ ಬೆಳೆದು ಇಡೀ ದೇಶ ಶಾಂತಿಯ ತಾಣವಾಗಲಿದೆ ಎಂದು ಪೇಜಾವರಶ್ರೀ ಹೇಳಿದರು.

ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಇಂದು ವಿಶ್ವಕ್ಕೆ ಶಾಂತಿ ಅಗತ್ಯ. ಅದನ್ನು ಸಾರುವ ಕೆಲಸ ಉಡುಪಿ ಯಿಂದ ನಡೆಯಲಿ. ಮಾನವೀಯ ಧರ್ಮವೇ ಶ್ರೇಷ್ಠ. ಹಾಜಿ ಅಬ್ದುಲ್ಲರ ಆದರ್ಶ ಪಾಲನೆಯಾಗಲಿ ಎಂದರು.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಪೇಜಾವರ ಸ್ವಾಮೀಜಿ ಬ್ಲಡ್ ಡೊನೇಟ್ ಟೀಂನ ಆರಿಫ್ ದೊಡ್ಡಣಗುಡ್ಡೆ, ಆತ್ರಾಡಿ ಮಸೀದಿ ಅಧ್ಯಕ್ಷ ಹಾಜಿ ಅಬೂಬಕರ್ ಪರ್ಕಳ, ಸಂತೋಷ್‌ನಗರ ಮಸೀದಿ ಅಧ್ಯಕ್ಷ ಹಬೀಬ್ ಅಲಿ, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಡುಪಿ ಬ್ಲಾಕ್ ಅಧ್ಯಕ್ಷ ಅಬ್ದುರ್ರಹ್ಮಾನ್ ಮಣಿಪಾಲ, ನಿತ್ಯಾನಂದ ಒಳಕಾಡು, ಸುರೇಶ್ ಶೆಟ್ಟಿ ಗುರ್ಮೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News