×
Ad

ಭೂಮಿ ವಸತಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮನವಿ

Update: 2017-06-24 22:00 IST

ಉಡುಪಿ, ಜೂ.24: ರಾಜ್ಯದ ಭೂಮಿ-ವಸತಿ ಸಂಬಂಧಿ ಸಮಸ್ಯೆಗಳ ಸಮಗ್ರ ಪರಿಹಾರಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ದಲಿತ ಹಿಂದುಳಿದ ಮತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ(ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ) ಉಡುಪಿ ಜಿಲ್ಲಾ ಘಟಕವು ಶನಿವಾರ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

2016ರ ನವಂಬರ್‌ನಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ನೀಡಿದ ಆಶ್ವಾಸನೆ ಮತ್ತು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿ ಯಿಂದ ಜೂ.15ರಿಂದ 23ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಅನಿರ್ಧಿಷ್ಟ ಧರಣಿ ಮತ್ತು ಅಲ್ಲಿಗೆ ಬಂದ ಕಂದಾಯ ಸಚಿವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ರಾಜ್ಯದ ಬಡಜನರ ಭೂಮಿ-ವಸತಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಏಕಗವಾಕ್ಷಿ ವ್ಯವಸ್ಥೆಯ ರೀತಿಯಲ್ಲಿ ಒಂದು ಉನ್ನತಾಧಿಕಾರ ಸಮಿತಿಯನ್ನು ಕೂಡಲೇ ರಚಿಸಬೇಕು. ಅದರಲ್ಲಿ ಹೋರಾಟ ನಿರತ ಸಂಘಟನೆಗಳ ಮತ್ತು ನಾಗರಿಕ ಸಮಾಜದ ಕನಿಷ್ಠ ಐದು ಮಂದಿ ಪ್ರತಿನಿಧಿಗಳಿರಬೇಕು.ಭೂಮಿ-ವಸತಿ ಸಂಬಂಧಿತ ಪ್ರಕರಣಗಳನ್ನು ಒಂದು ತಿಂಗಳೊಳಗಾಗಿ ಇತ್ಯರ್ಥ ಪಡಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಾರ್ವತ್ರಿಕವಾದ ಒಂದು ಕಾಮನ್ ಆದೇಶವನ್ನು ಜಾರಿ ಮಾಡಬೇಕು. ಅಂತಹ ಹೋರಾಟಗಳ ಹಿನ್ನೆಲೆ ಯಲ್ಲಿ ರಾಜ್ಯದಾದ್ಯಂತ ಬಡಜನರ ಮೇಲೆ ಹಾಕಿರುವ ಎಲ್ಲಾ ಪೊಲೀಸ್ ಕೇಸುಗಳನ್ನೂ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸ ಲಾಗಿದೆ.

ಮಹಾಒಕ್ಕೂಟದ ಗೌರವಾಧ್ಯಕ್ಷ ಸುಂದರ ಮಾಸ್ತರ್, ಅಧ್ಯಕ್ಷ ಉದಯ ಕುಮಾರ್ ತಲ್ಲೂರು, ಉಪಾಧ್ಯಕ್ಷರಾದ ಸುಂದರ್ ಕಪ್ಪೆಟ್ಟು, ನಾರಾಯಣ ಮಣೂರು, ವಿಶ್ವನಾಥ ಪೇತ್ರಿ, ಒಕ್ಕೂಟದ ಅಧ್ಯಕ್ಷ ಶ್ಯಾಮರಾಜ್ ಬಿರ್ತಿ, ಉಪಾಧ್ಯಕ್ಷ ಹುಸೇನ್ ಕೋಡಿಬೆಂಗ್ರೆ, ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಅಧ್ಯಕ್ಷ ಜಿ.ರಾಜಶೇಖರ್, ಪ್ರಶಾಂತ್ ಜತ್ತನ್ನ, ಎಸ್‌ಎಸ್.ಪ್ರಸಾದ್ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News