×
Ad

ರನೌಟ್ ಆಗಿ ದಾಖಲೆ ಪುಸ್ತಕ ಸೇರಿದ ಜೇಸನ್ ರಾಯ್!

Update: 2017-06-25 09:56 IST

ಲಂಡನ್, ಜೂ.24: ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೇಸನ್ ರಾಯ್ ದಕ್ಷಿಣ ಆಫ್ರಿಕ ವಿರುದ್ಧದ  ಟ್ವೆಂಟಿ-20 ಪಂದ್ಯದಲ್ಲಿ ರನೌಟ್ ಮೂಲಕ ದಾಖಲೆ ಪುಸ್ತಕಕ್ಕೆ ಸೇರಿದರು.

ಇಂಗ್ಲೆಂಡ್‌ನ ಆರಂಭಿಕ ಆಟಗಾರ ರಾಯ್ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಕಾರಣಕ್ಕೆ ಅಂಪೈರ್‌ಗಳು ರನೌಟ್ ತೀರ್ಪು ನೀಡಿದರು. ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ವೊಬ್ಬ ಈ ರೀತಿ ರನೌಟ್‌ಗೆ ಬಲಿಪಶುವಾಗಿದ್ದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ರಾಯ್ ತಪ್ಪು ಕಾರಣಕ್ಕಾಗಿ ದಾಖಲೆ ಪುಟ ಸೇರಿದರು.

ಇಂಗ್ಲೆಂಡ್‌ನ ಇನಿಂಗ್ಸ್‌ನ 16ನೆ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ರಾಯ್ ಸಹ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಕ್‌ವರ್ಡ್ ಪಾಯಿಂಟ್‌ನತ್ತ ಚೆಂಡನ್ನು ತಳ್ಳಿದರು. ಮತ್ತೊಂದು ತುದಿಯಲ್ಲಿದ್ದ ರಾಯ್‌ಗೆ ಒಂಟಿ ರನ್‌ಗಾಗಿ ಕರೆ ನೀಡಿದರು. ಆದರೆ ಲಿಯಾಮ್ ಕೊನೆಯ ಕ್ಷಣದಲ್ಲಿ ತನ್ನ ಮನಸ್ಸು ಬದಲಾಯಿಸಿ ಕ್ರೀಸ್‌ಗೆ ವಾಪಸಾದರು.

ರಾಯ್ ನಾನ್‌ಸ್ಟ್ರೈಕ್‌ನತ್ತ ವಾಪಸಾಸುವ ಯತ್ನದಲ್ಲಿದ್ದಾಗ ದಕ್ಷಿಣ ಆಫ್ರಿಕ ಫೀಲ್ಡರ್ ಓರ್ವ ಎಸೆದ ಚೆಂಡು ರಾಯ್ ಬೂಟ್‌ಗೆ ತಗಲಿತು. ರಾಯ್ ಓಡುತ್ತಿದ್ದಾಗ ಹಾದಿಯನ್ನು ಬದಲಿಸಿದ್ದರು. ದಕ್ಷಿಣ ಆಫ್ರಿಕ ಆಟಗಾರರು ಔಟ್‌ಗಾಗಿ ಮನವಿ ಮಾಡಿದರು. ಆನ್‌ಫೀಲ್ಡ್ ಅಂಪೈರ್‌ಗಳು ಟಿವಿ ಅಂಪೈರ್ ಮೊರೆ ಹೋದರು. ಟಿವಿ ಅಂಪೈರ್ ರಾಯ್ ವಿರುದ್ಧ ರನೌಟ್ ತೀರ್ಪು ನೀಡಿ ಅಚ್ಚರಿ ಮೂಡಿಸಿದರು.

ದಕ್ಷಿಣ ಆಫ್ರಿಕ ತಂಡ ಇಂಗ್ಲೆಂಡ್‌ನ ವಿರುದ್ಧ  ಟ್ವೆಂಟಿ-20 ಪಂದ್ಯವನ್ನು ಕೇವಲ 3 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News