‘ಪೆರ್ನಾಳ್’ ಆಚರಣೆಯಲ್ಲಿ ಗೊಂದಲ
ಮಂಗಳೂರು, ಜೂ.25: ದ.ಕ. ಜಿಲ್ಲೆಯ ಉಳ್ಳಾಲ ಸಹಿತ ಕೆಲವು ಕಡೆ ಸುನ್ನಿ ವಲಯದಲ್ಲಿ ರವಿವಾರ ‘ಪೆರ್ನಾಳ್’ ಆಚರಣೆಗೆ ಸಂಬಂಧಿಸಿ ಗೊಂದಲ ಸೃಷ್ಟಿಯಾಗಿದೆ.
ಭಟ್ಕಳದಲ್ಲಿ ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲಾ ಖಾಝಿಯವರು ಪರಸ್ಪರ ಸಮಾಲೋಚನೆ ನಡೆಸಿ ರವಿವಾರ ಪೆರ್ನಾಳ್ ಆಚರಿಸಲು ಕರೆ ನೀಡಿದ್ದರು.
ಅದರಂತೆ ದ.ಕ. ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ತಕ್ದೀರ್(ಈದ್ ಪ್ರಯುಕ್ತ) ಮೊಳಗಿಸಲ್ಪಟ್ಟಿತು. ಆದರೆ ಉಳ್ಳಾಲ ಖಾಝಿ ಕೂರತ್ ತಂಙಳ್‌ರವರ ಕೆಲವು ಬೆಂಬಲಿಗರು ಕೂರತ್ ತಂಙಳ್‌ರವರು ಪೆರ್ನಾಳ್ ಆಚರಣೆಗೆ ಸಂಬಂಧಿಸಿ ಯಾವುದೇ ಘೋಷಣೆ ಹೊರಡಿಸದ ಕಾರಣ ರವಿವಾರ ಪೆರ್ನಾಳ್ ಆಚರಿಸುವಂತಿಲ್ಲ ಎಂದು ಹಠ ಹಿಡಿದರು.
ಈ ಮಧ್ಯೆ, ವಾಟ್ಸಾಪ್‌ನಲ್ಲಿ ಕೂರತ್ ತಂಙಳ್‌ರದ್ದು ಎಂದು ಹೇಳಲಾದ ಧ್ವನಿ ಸಂದೇಶವೊಂದು ನಿನ್ನೆ ರಾತ್ರಿ ಹರಿದಾಡತೊಡಗಿತ್ತು. ಎಲ್ಲಿಯೂ ಚಂದ್ರದರ್ಶನದ ಮಾಹಿತಿ ಇಲ್ಲದ ಕಾರಣ ರವಿವಾರ ಪೆರ್ನಾಳ್ ಆಚರಿಸಲಾಗದು ಎಂದು ಆ ಧ್ವನಿಯಲ್ಲಿ ಹೇಳಲಾಗಿತ್ತು. ಇದು ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಸಹಿತ ಕೆಲವು ಕಡೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು.
ಕೆಲವರು ಉಪವಾಸ ಮುಂದುವರಿಸಲು ಪಟ್ಟುಹಿಡಿದರೆ ಮತ್ತೆ ಕೆಲವರು ಪೆರ್ನಾಳ್ ಆಚರಿಸಬೇಕೆಂದು ವಾದಿಸಿದರು. ಈ ವಿವಾದ ಉಳ್ಳಾಲ ಮತ್ತು ಆಸುಪಾಸಿನ ಕೆಲವು ಕಡೆ ತಡರಾತ್ರಿವರೆಗೂ ಮುಂದುವರಿಯಿತು. ಕೆಲವು ಕಡೆ ತಕ್ದೀರ್ ಮೊಳಗಿಸಿದ ಬಳಿಕ ರಂಝಾನ್‌ನ ತರಾವೀಹ್ ವಿಶೇಷ ನಮಾಝ್ ಮಾಡಲಾಯಿತು.
ಈತನ್ಮಧ್ಯೆ, ಆ ಬಳಿಕ ಮುಂಜಾನೆ ವೇಳೆಗೆ ರಾತ್ರಿ ತರಾವೀಹ್ ನಮಾಝ್ ನಿರ್ವಹಿಸಿದ ಮಸೀದಿಗಳಲ್ಲಿ ಪೆರ್ನಾಳ್ ಆಚರಣೆಗೆ ಸಂಬಂಧಿಸಿ ಮತ್ತೆ ತಕ್ದೀರ್ ಮೊಳಗಿತು.
ಉಳ್ಳಾಲಕ್ಕೆ ಕೂರತ್ ತಂಙಳ್ ಖಾಝಿಯಾಗಿರುವುದರಿಂದ ಅವರ ಮಾತೇ ಅಂತಿಮ ಎಂದು ಕೆಲವರು ವಾದ ಮುಂದುವರಿಸಿದರು. ಕೂರತ್ ತಂಙಳ್ ಕಳೆದೊಂದು ವರ್ಷದಿಂದ ಉಳ್ಳಾಲ ದರ್ಗಾ ಕಡೆಗೆ ಭೇಟಿ ನೀಡಿಲ್ಲ. ಶನಿವಾರ ಚಂದ್ರದರ್ಶನವಾದ ಸಂದರ್ಭವೂ ಅವರು ಯಾವುದೇ ಘೋಷಣೆ ಮಾಡಿಲ್ಲ. ಇದೀಗ ಪೆರ್ನಾಳ್ ಆಚರಣೆಗೆ ಸಂಬಂಧಿಸಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂಬುದು ಇತರ ಕೆಲವರ ವಾದ ಮುಂದುವರಿಸಿದ್ದಾರೆ.
ಒಟ್ಟಿನಲ್ಲಿ ಕೆಲವು ಕಡೆ ರವಿವಾರ ಉಪವಾಸ ಮುಂದುವರಿದಿದ್ದರೆ, ದ.ಕ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಪೆರ್ನಾಳ್ ಆಚರಿಸಲಾಗುತ್ತಿದೆ.