×
Ad

ಪಜೀರು: ಜಾನುವಾರು ಕಡಿಯುತ್ತಿದ್ದ ಮನೆಗೆ ಗುಂಪಿನಿಂದ ದಾಳಿ

Update: 2017-06-25 11:33 IST

 ಕೊಣಾಜೆ, ಜೂ.25: ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಅಡ್ಕ ಎಂಬಲ್ಲಿಯ ಮನೆಯೊಂದರಲ್ಲಿ ಶನಿವಾರ ತಡರಾತ್ರಿಯ ವೇಳೆ ಜಾನುವಾರುಗಳನ್ನು ಕಡಿಯುತ್ತಿದ್ದ ಮಾಹಿತಿ ಪಡೆದ ಸುಮಾರು 50 ಜನರ ಗುಂಪು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದಕ್ಕೆ ಪ್ರತಿಯಾಗಿ ಕೂಡಾ ಪ್ರತಿದೂರು ಕೂಡಾ ದಾಖಲಾಗಿದೆ.

ಈ ಸಂದರ್ಭದಲ್ಲಿ ಮೂವರು ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಾವೂರು ಗ್ರಾಮದ ಮನ್ಸೂರು (28 ), ಇರ್ಷಾದ್ (17) ಹಾಗೂ ಅಂಬ್ಲಮೊಗರು ಗ್ರಾಮದ ಅಸ್ಲಂ ಯಾನೆ ಸಲಾಂ (38) ಎಂಬವರು ದಾಳಿಯಿಂದ ಗಾಯಗೊಂಡವರಾಗಿದ್ದಾರೆ.

    ಈ ಮೂವರು ಅಡ್ಕ ಎಂಬಲ್ಲಿರುವ ಜೋಕಿ ಡಿಸೋಜ ಎಂಬವರ ಮನೆಯಲ್ಲಿ ಜಾನುವಾರುಗಳನ್ನು ಮಾಂಸಕ್ಕಾಗಿ ಕಡಿಯುತ್ತಿದ್ದರು ಎನ್ನಲಾಗಿದ್ದು, ಮಾಂಸ ಕೊಂಡೊಯ್ಯಲು ತಡರಾತ್ರಿ ರಿಕ್ಷಾ ಸಂಚಾರ ಅಧಿಕವಿದ್ದಾಗ, ಸಂಶಯಗೊಂಡ ಸ್ಥಳೀಯರು ಹಿಂದು ಸಂಘಟನೆಗೆ ಮಾಹಿತಿ ನೀಡಿದ್ದರು.

ಅದರಂತೆ ಸುಮಾರು 50 ಮಂದಿಯ ತಂಡ ಮನೆಗೆ ದಾಳಿ ನಡೆಸಿ ಕಲ್ಲು, ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಮನೆಯಲ್ಲಿದ್ದ ರೂ. 50,000 ನಗದು ಕಳವುಗೈದಿದ್ದಾರೆಂದು ಆಸ್ಪತ್ರೆಯಲ್ಲಿ ದಾಖಲಾಗಿರುವವರು ಆರೋಪಿಸಿ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೋಕಿ ಡಿಸೋಜಾ ಅವರು ಸಾಕಿದ ಜಾನುವಾರುಗಳನ್ನೇ ಮಾರಾಟ ನಡೆಸಿ, ಮನೆಯಲ್ಲೇ ಮಾಂಸ ಮಾಡಲು ಮೂವರಲ್ಲಿ ತಿಳಿಸಿದ್ದರು. ಅದರಂತೆ ಮೂವರು ಎರಡು ದನಗಳನ್ನು ಕಡಿಯುತ್ತಿದ್ದರು ಎನ್ನಲಾಗಿದೆ.

ಜಾನುವಾರುಗಳನ್ನು ಕಡಿಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಹಿಂದು ಸಂಘಟನೆ ಕಾರ್ಯಕರ್ತರು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಡರಾತ್ರಿ 1.30ರ ಸುಮಾರಿಗೆ ಪೊಲೀಸರು ಜೋಕಿಂ ಅವರ ಮನೆಗೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಅಸ್ಲಂ ಓಡಲು ಯತ್ನಿಸಿದ್ದು, ಸಮೀಪದಲ್ಲೇ ಇದ್ದ ಹೊಂಡಕ್ಕೆ ಬಿದ್ದು ಕೈ ಮತ್ತು ಕಾಲು ಮುರಿತಕ್ಕೊಳಗಾಗಿದ್ದಾನೆ. ಇತರೆ ಇಬ್ಬರ ಮತ್ತು ಮನೆಯ ಮಾಲೀಕರ ಮೇಲೆ ಯಾವುದೇ ರೀತಿಯ ಹಲ್ಲೆಯೂ ನಡೆದಿಲ್ಲ. ಅಲ್ಲಿದ್ದ ನಗದನ್ನು ಕಳವು ನಡೆಸಲಾಗಿಲ್ಲ. ಜಾನುವಾರುಗಳನ್ನು ಅಕ್ರಮವಾಗಿ ಮಾಂಸಕ್ಕಾಗಿ ಕಡಿಯುವುದರ ವಿರುದ್ಧ ಪ್ರಕರಣ ದಾಖಲಿಸುವಂತೆ ಹಿಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಇತ್ತಂಡಗಳ ಮೇಲೆ ಪ್ರಕರಣ ದಾಖಲು:

ಇತ್ತಂಡಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಅಕ್ರಮವಾಗಿ ಅನುಮತಿಯಿಲ್ಲದೆ ಜಾನುವಾರು ಕಡಿಯುವುದರ ವಿರುದ್ಧ ಆಸ್ಪತ್ರೆಯಲ್ಲಿರುವ ಮೂವರ ಪ್ರಕರಣ ಇದ್ದು, ಮೂವರು ಕೊಣಾಜೆ ಪೊಲೀಸರ ವಶದಲ್ಲಿದ್ದಾರೆ. ಸ್ಥಳದಲ್ಲಿದ್ದ ರಿಕ್ಷಾ ಮತ್ತು ರಿಟ್ಝ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪ್ರಕರಣದ ಸಂಬಂಧ ಶಾನ್ ಕುಮಾರ್, ಮೂಹನ ಪಜೀರು, ಹರಿಪ್ರಸಾದ್ ಪಜೀರು, ಪುರಂದರ ಪಜೀರು, ಸಚಿನ್ ಪಜೀರು ಎಂಬವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶಾಂತರಾಜು ಹೇಳಿದ್ದಾರೆ.

ಸ್ಥಳಕ್ಕೆ ಎಸಿಪಿ ಶ್ರುತಿ, ಕೊಣಾಜೆ ಇನ್ಸ್‌ಪೆಕ್ಟರ್ ಅಶೋಕ್ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಮಾತ್ರವಲ್ಲದೆ ಸ್ಥಳದಲ್ಲಿ ಎರಡು ಕೆಎಸ್‌ಆರ್‌ಪಿ ಬಸ್‌ನೊಂದಿಗೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಭದ್ರತೆಯನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News