×
Ad

ಸೌದಿಯಲ್ಲಿ ಸಿಲುಕಿರುವ ತೆಲಂಗಾಣದ ಸಾವಿರಾರು ಅಕ್ರಮ ವಲಸಿಗರಿಗೆ ಜೈಲು, ದಂಡದ ಭೀತಿ

Update: 2017-06-25 12:19 IST

ಹೈದರಾಬಾದ್,ಜೂ.25: ಅಕ್ರಮ ವಲಸಿಗರು ದೇಶ ಬಿಟ್ಟು ತೊಲಗಲು ಸೌದಿ ಸರಕಾರ ನೀಡಿರುವ 90 ದಿನಗಳ ಸಾಮೂಹಿಕ ಕ್ಷಮಾದಾನ ಅವಧಿಯು ಜೂ.25ಕ್ಕೆ ಅಂತ್ಯಗೊಳ್ಳಲಿದೆ. ಭಾರೀ ಸಂಖ್ಯೆಯಲ್ಲಿರುವ ತೆಲಂಗಾಣದ ಅಕ್ರಮ ವಲಸಿಗರು ಸೌದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅನಧಿಕೃತವಾಗಿ ನೆಲೆಸಿದ ಆರೋಪದಲ್ಲಿ ಸೆರೆಮನೆ ವಾಸದೊಂದಿಗೆ 10,000 ಸೌದಿ ರಿಯಲ್(1.8 ಲಕ್ಷ ರೂ.) ದಂಡ ತೆರಬೇಕಾದ ಭೀತಿಯಲ್ಲಿದ್ದಾರೆ.

 ಸಾಮೂಹಿಕ ಕ್ಷಮಾದಾನ ಅಧಿಕೃತವಾಗಿ ಜೂ.25ಕ್ಕೆ ಕೊನೆಗೊಳ್ಳಲಿದ್ದು, ಇದರ ಜೊತೆಗೆ ಅಕ್ರಮ ಕಾರ್ಮಿಕರು ದೇಶದಿಂದ ಹೊರಹೋಗಲು ದಾಖಲೆ ಪತ್ರಗಳ ತಯಾರಿ ಪ್ರಕ್ರಿಯೆ ಅವಧಿಯೂ ಕೊನೆಯಾಗಲಿದೆ. ಅವಧಿಗಿಂತ ಹೆಚ್ಚು ಸಮಯದಿಂದ ದೇಶದಲ್ಲಿ ನೆಲೆಸಿರುವ ವಲಸಿಗರ ಮೇಲೆ ಶಿಸ್ತುಕ್ರಮ ಜಾರಿಗೆ ಬರಲಿದ್ದು, ಅಕ್ರಮ ವಲಸಿಗರು ಎರಡು ವರ್ಷ ಜೈಲು ಸಜೆ ಅನುಭವಿಸಬೇಕಾಗುತ್ತದೆ.

"ತೆಲಂಗಾಣದ ಕನಿಷ್ಠ 5,000 ವಲಸಿಗರು ಸೌದಿ ಅರೇಬಿಯಾದಲ್ಲಿ ವಿವಿಧ ಕಾರಣಗಳಿಂದಾಗಿ ಸಿಲುಕಿಹಾಕಿಕೊಂಡಿದ್ದಾರೆ. ಸಾಮೂಹಿಕ ಕ್ಷಮಾದಾನದ ಅವಧಿಯನ್ನು ವಿಸ್ತರಿಸುವಂತೆ ಕೇಂದ್ರ ಸರಕಾರ ಸೌದಿ ಸರಕಾರನ್ನು ಒತ್ತಾಯಸಬೇಕಾಗಿದೆ. ಸೌದಿಯಲ್ಲಿ ವಿವಿಧ ಕೇಸ್‌ಗಳನ್ನು ಎದುರಿಸುತ್ತಿರುವ ತೆಲಂಗಾಣ ವಲಸಿಗರನ್ನು ದೇಶಕ್ಕೆ ಕರೆತರಲು ರಾಜ್ಯ ಸರಕಾರವೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಗತ್ಯಬಿದ್ದರೆ ರಾಜ್ಯ ಸರಕಾರ ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಸೌದಿಯಲ್ಲಿ ಸಿಲುಕಿರುವ ತೆಲಂಗಾಣ ವಲಸಿಗರನ್ನು ಕರೆತರಬೇಕು'' ಎಂದು ವಲಸಿಗರ ಹಕ್ಕುಗಳ ಕಾರ್ಯಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಪಿ. ಬಸಂತ್ ರೆಡ್ಡಿ ಹೇಳಿದ್ದಾರೆ.

 ತೆಲಂಗಾಣದ ಸಾವಿರಾರು ಕಾರ್ಮಿಕರು ಕುಗ್ರಾಮಗಳಲ್ಲಿ ಕೆಲಸ ಮಾಡುತ್ತಿರುವ ಕಾರಣ ಸೌದಿ ಸರಕಾರದ ಸಾಮೂಹಿಕ ಕ್ಷಮಾದಾನದ ಮಾಹಿತಿ ಅವರಿಗೆ ಇನ್ನೂ ತಲುಪಿಲ್ಲ. ಕೆಲವು ಕಾರ್ಮಿಕರ ಮೇಲೆ ಕಳ್ಳತನದ ಕೇಸ್‌ಯಿರುವ ಕಾರಣ ಸ್ವದೇಶಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ವಲಸಿಗ ಕಾರ್ಮಿಕರ ವಿರುದ್ಧ ಲೆಕ್ಕವಿಲ್ಲದಷ್ಟು ಕೇಸ್‌ಗಳಿದ್ದು, ಇದು ಅವರಿಗೆ ಸೌದಿಯಿಂದ ಸ್ವದೇಶಕ್ಕೆ ವಾಪಸಾಗಲು ಅಡ್ಡಿಯಾಗಿದೆ. ರಮಝಾನ್ ಮಾಸದಲ್ಲಿ ವಿಮಾನದ ಟಿಕೆಟ್‌ಗಳ ದರವೂ ಏರಿಕೆಯಾಗಿದೆ ಎಂದು ಸೌದಿ ಮೂಲಗಳು ತಿಳಿಸಿವೆ.

ಭಾರತದ ರಾಯಭಾರಿ ಕಚೇರಿಯು ಸೌದಿಯ ವಿವಿಧೆಡೆ ಕಳೆದ ಮೂರು ತಿಂಗಳಿಂದ ಶಿಬಿರಗಳನ್ನು ಆಯೋಜಿಸಿದ್ದು, ಸ್ವದೇಶಕ್ಕೆ ವಾಪಸಾಗಲು  ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ಯತ್ನಿಸಲಾಗಿತ್ತು. ಒಂದು ಅಂದಾಜಿನ ಪ್ರಕಾರ  ಸಾಮೂಹಿಕ ಕ್ಷಮಾದಾನ ದ ಲಾಭ ಪಡೆದು ಕನಿಷ್ಠ 20,000 ಭಾರತೀಯರು ಸ್ವದೇಶಕ್ಕೆ ವಾಪಸಾಗಿದ್ದಾರೆ. ಸೌದಿಯಲ್ಲಿ ಉಳಿದಿರುವ ಅಕ್ರಮ ವಲಸಿಗರು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News