ಉಳ್ಳಾಲ: ಸಂಭ್ರಮದ ಈದುಲ್ ಫಿತ್ರ್
ಉಳ್ಳಾಲ, ಜೂ.25: ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಮತ್ತು ಮಂಗಳೂರು ಖಾಝಿ ತ್ವಾಕಾ ಉಸ್ತಾದ್‌ರವರು ಭಟ್ಕಳದಲ್ಲಿ ಚಂದ್ರದರ್ಶನವಾಗಿರುವ ಬಗ್ಗೆ ನೀಡಲಾದ ಮಾಹಿತಿಯ ಮೇರೆಗೆ ಉಳ್ಳಾಲದಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಿಸಲಾಗಿದೆ. ಸೈಯದ್ ಫಝಲ್‌ಕೋಯಮ್ಮ ತಂಙಳ್ ಅವರು ಒಂದು ವರ್ಷದಿಂದ ಉಳ್ಳಾಲದಲ್ಲಿ ಸಂಪರ್ಕ ಇಲ್ಲದ ಕಾರಣ ಸಹಾಯಕ ಖಾಝಿ ಅಬ್ದುಲ್ ರವೂಫ್ ಉಸ್ತಾದ್‌ರವರು ಮಾಹಿತಿ ಪಡೆದು ಈದ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಉಳ್ಳಾಲದಲ್ಲಿ ಸಂಭ್ರಮದಿಂದ ಈದುಲ್ ಫಿತ್ರ್ ಆಚರಿಸಲಾಗುತ್ತಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಹೇಳಿದ್ದಾರೆ.
ಅವರು ರವಿವಾರ ಉಳ್ಳಾಲದಲ್ಲಿ ಪೆರ್ನಾಳ್ ನಮಾಝ್ ಬಳಿಕ ಮಾತನಾಡಿದರು.
ಈದುಲ್ ಫಿತ್ರ್ ಶಾಂತಿ, ಸೌರ್ಹಾದ ಸಾರುವ ಹಬ್ಬವಾಗಿದೆ. ಈ ಹಬ್ಬವು ಎಲ್ಲರಿಗೂ ಶಾಂತಿ ಮತ್ತು ನೆಮ್ಮದಿಯನ್ನು ತರಲಿ. ಅಶಾಂತಿಯನ್ನು ಬಯಸುವವರು ಯಾರು ಕೂಡಾ ಇಲ್ಲ. ಕೆಲವು ಕಡೆ ದುಷ್ಕರ್ಮಿಗಳು ಅಶಾಂತಿಯನ್ನು ಸೃಷ್ಟಿಸುತ್ತಾರೆ. ಅಂತಹ ವಾತಾವರಣಕ್ಕೆ ಪ್ರೋತ್ಸಾಹ ನೀಡುವವರು ಇಲ್ಲ. ಉಳ್ಳಾಲದಲ್ಲಿ ಶಾಂತಿಯ ವಾತಾವರಣದಲ್ಲಿ ಹಬ್ಬವನ್ನು ಆಚರಿಸಲಾಗಿದೆ ಎಂದರು.
ಬಳಿಕ ಮಾತಾಡಿದ ಉಳ್ಳಾಲ ಸಹಾಯಕ ಖಾಝಿ ಹಾಜಿ ಅಬ್ದುಲ್ ರವೂಫ್ ಮುಸ್ಲಿಯಾರ್, ಚಂದ್ರ ದರ್ಶನದ ಬಗ್ಗೆ ಹಲವು ವರ್ಷಗಳಿಂದ ಸಹಾಯಕ ಖಾಝಿಯಾದ ನಾನು ತೀರ್ಮಾನಿಸುತ್ತಿದ್ದು, ಭಟ್ಕಳದ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಈದುಲ್ ಫಿತ್ರ್ ಆಚರಿಸಲಾಗಿದೆ. ಇವತ್ತು ಉಪವಾಸ ಆಚರಿಸುವುದು ಹರಾಮ್ ಆಗಿರುತ್ತದೆ ಎಂದರು.
ಆಹಾರ ಸಚಿವರಾದ ಯು.ಟಿ ಖಾದರ್‌ರವರು ಮಾತನಾಡಿ, ಈದ್ ಹಬ್ಬವು ಶಾಂತಿ ಸೌಹಾರ್ದದ ಹಬ್ಬ, ಎಲ್ಲೆಡೆ ಶಾಂತಿಯ ವಾತಾವರಣ ನೆಲೆಗೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಉಪಾಧ್ಯಕ್ಷ ಯು.ಕೆ ಮೋನು ಇಸ್ಮಾಯೀಲ್, ಹಾಜಿ ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿ ಆಝಾದ್ ಇಸ್ಮಾಯೀಲ್, ಕೋಶಾಧಿಕಾರಿ ಯುಕೆ ಇಲ್ಯಾಸ್. ಅಡಿಟರ್ ಯು.ಟಿ ಇಲ್ಯಾಸ್, ಅರಬಿಕ್ ಟ್ರಸ್ಟ್ ಉಪಾಧ್ಯಕ್ಷ ಹಾಜಿ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಇಬ್ರಾಹೀಮ್ ಅಳೇಕಲ, ಸದಸ್ಯರಾದ ಅಲೀ ಮೋನು, ಹಮೀದ್ ಅಳೇಕಲ, ಮುಸ್ತಫ ಮಂಚಿಲ, ಮಯ್ಯದ್ದಿ ಕೋಡಿ, ಯೂಸುಫ್ ಲೀಗ್, ಬಾವ ಫಕೀರ್ ಸಾಬ್, ಎಸ್. ಉಮರಬ್ಬ, ಕುಂಞಿ ಅಹ್ಮದ್ ಅಳೆಕಲ ಅಬೂಬಕ್ಕರ್ ಅಲೀ ನಗರ ಮತ್ತಿತರರು ಉಪಸ್ಥಿತರಿದ್ದರು.