ಸುಕ್ಮಾ ಎನ್‌ಕೌಂಟರ್: ಮೃತರ ಸಂಖ್ಯೆ 12 ಕ್ಕೇರಿಕೆ

Update: 2017-06-25 11:46 GMT

ರಾಯಪುರ,ಜೂ.25: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ಚಿಂತಗುಫಾ ಪ್ರದೇಶದಲ್ಲಿ ಶನಿವಾರ ಮಾವೋವಾದಿಗಳೊಂದಿಗೆ ಗುಂಡಿನ ಕಾಳಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ)ಯ ಕಾನಸ್ಟೇಬಲ್‌ನೋರ್ವ ರವಿವಾರ ಮೃತಪಟ್ಟಿದ್ದು, ಇದರೊಂದಿಗೆ ಕಾರ್ಯಾಚರಣೆಯಲ್ಲಿ ಮೃತರ ಸಂಖ್ಯೆ 12ಕ್ಕೇರಿದೆ.

ಶನಿವಾರ ಇಬ್ಬರು ಡಿಆರ್‌ಜಿ ಪೊಲೀಸರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿ ದ್ದರು.

ಚಿಂತಗುಫಾ ಪ್ರದೇಶದಲ್ಲಿ ಮಾವೋವಾದಿಗಳಿರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರ ತಂಡ ಶನಿವಾರ ಬೆಳಿಗ್ಗೆ ಅಲ್ಲಿ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಮಾವೋವಾದಿಗಳ ಭದ್ರನೆಲೆಯಾದ ದೋಂಡಾಮಾರ್ಕಾ ಅರಣ್ಯದ ಮೂಲಕ ಸಾಗುತ್ತಿದ್ದಾಗ ಬಂಡುಕೋರರು ಗುಂಡುಗಳನ್ನು ಹಾರಿಸಿದ್ದು, ಐವರು ಭದ್ರತಾ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದರು.

ಗಸ್ತು ತಂಡದ ಕೆಲವರು ಮೂಲಶಿಬಿರಕ್ಕೆ ವಾಪಸಾಗುತ್ತಿದ್ದಾಗ ಚಿಂತಗುಫಾದಿಂದ 17ಕಿ.ಮೀ.ದೂರದ ಅರಣ್ಯದಲ್ಲಿ ದುರ್ಮಾ ಗ್ರಾಮದ ಬಳಿ ಮತ್ತೆ ಮಾವೋವಾದಿಗಳ ದಾಳಿಗೆ ಗುರಿಯಾಗಿದ್ದರು. ಈವೇಳೆ ಇಬ್ಬರು ಡಿಆರ್‌ಜಿ ಸಿಬ್ಬಂದಿಗಳು ಕೊಲ್ಲಲ್ಪಟ್ಟು, ಇಬ್ಬರು ಗಾಯಗೊಂಡಿದ್ದರು. ಈ ಪೈಕಿ ಓರ್ವ ಗಾಯಾಳು ರವಿವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಡಿಐಜಿ ಸುಂದರರಾಜ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಶನಿವಾರದಿಂದ ಮಾವೋವಾದಿಗಳೊಂದಿಗೆ ಭೀಷಣ ಗುಂಡಿನ ಕಾಳಗದಲ್ಲಿ ತೊಡಗಿದ್ದ ತಂಡವು ರವಿವಾರ ಬೆಳಿಗ್ಗೆ ಶಿಬಿರಕ್ಕೆ ಮರಳಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News