ಏಕತೆ ಪ್ರತಿ ಧರ್ಮದ ಸಂದೇಶ: ಯು.ಟಿ. ಖಾದರ್
ಉಳ್ಳಾಲ, ಜೂ.25: ಏಕತೆ, ಪ್ರೀತಿ, ವಿಶ್ವಾಸ, ಸಹೋದರತೆ ಪ್ರತಿ ಧರ್ಮದ ಸಂದೇಶವಾಗಿದೆ. ಆರೋಗ್ಯ ಸೇವೆಯಲ್ಲಿ ಮಾನವೀಯತೆಯನ್ನು ಕಾಪಾಡಿಕೊಂಡು ಬರುತ್ತಿರುವ ಆಸ್ಪತ್ರೆ ಬಡವರನ್ನು ಗುರುತಿಸುವ ಕಾರ್ಯ ಶ್ಲಾಘನೀಯ. ಸಂಪಾದಿಸಿದ ಸಂಪತ್ತಿನಲ್ಲಿ ಅಲ್ಪವನ್ನು ನೊಂದವರಿಗೆ, ಸಮಾಜದಿಂದ ಹಿಂದುಳಿದವರಿಗೆ ವಿತರಿಸುವ ಕಾರ್ಯ ಹಿಂದಿನಿಂದ ಬಂದಿರುತ್ತದೆ. ಅದನ್ನು ಪಾಲಿಸುವ ಜವಾಬ್ದಾರಿ ಮುಂದಿನ ಪೀಳಿಗೆಯಿಂದಲೂ ಆಗಬೇಕಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿರುವ ಸರೋಜ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಳ್ಳಾಲದ ಆಸ್ಪತ್ರೆ ಆವರಣದಲ್ಲಿ ಶನಿವಾರ ಜರಗಿದ ಸಾಂಕೇತಿಕ ಇಫ್ತಾರ್ ಕೂಟ ಹಾಗೂ ರಮಝಾನ್ ಕಿಟ್ ವಿತರಿಸಿ ಮಾತನಾಡಿದರು.
ಸಹೋದರತೆ ಮತ್ತು ವಿಶ್ವಾಸಯುತ ವಾತಾವರಣವನ್ನು ನಿರ್ಮಿಸುವುದೇ ಹಬ್ಬಗಳ ಸಂದೇಶವಾಗಿದ್ದು, ಇದನ್ನು ಮನದಲ್ಲಿಟ್ಟುಕೊಂಡು ಸರೋಜ್ ಆಸ್ಪತ್ರೆ ಹಮ್ಮಿಕೊಂಡಿರುವ ಕಾರ್ಯಕ್ರಮ ಶಾಂತಿ ಮತ್ತು ಏಕತೆಯನ್ನು ಬೆಳೆಸಲು ಪೂರಕವಾಗಿದೆ ಎಂದು ದರ್ಗಾದ ಉಸ್ತಾದ್ ಮುಝಾಂಬಿಲ್ ದುಆ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರೋಜ್ ಆಸ್ಪತ್ರೆ ಮುಖ್ಯಸ್ಥ ಡಾ.ಗಜಾನನ ಪ್ರಭು ಮಾತನಾಡಿ, ರಮಝಾನ್ ಎಂದರೆ ಉಪವಾಸ ಹಿಡಿಯುವ ಪವಿತ್ರ ತಿಂಗಳೆಂಬ ಸಂದೇಶ ಇಸ್ಲಾಮ್ ನಲ್ಲಿದೆ. ಆರೋಗ್ಯದ ದೃಷ್ಟಿಯಿಂದ ಉಪವಾಸ ಇರುವ ಮೂಲಕ ದೇಹದಲ್ಲಿನ ಪ್ರಕ್ರಿಯೆಗಳಲ್ಲಿ ಬದಲಾವಣೆ ಇದ್ದು, ಇದು ಕ್ಯಾನ್ಸರ್ ಸೆಲ್ ಗಳನ್ನು ಕೊಲ್ಲುತ್ತದೆ ಎಂಬುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಪವಿತ್ರ ತಿಂಗಳಿನಲ್ಲಿ ಆರ್ಥಿಕವಾಗಿ ಹಿಂದುಳಿದವರ ಸೇವೆ ನಡೆಸುವುದು ಸಮಾಜ ಮೆಚ್ಚುವ ಕೆಲಸವಾಗಿದ್ದು, ಇದಕ್ಕೆ ಪೂರಕವಾಗಿ ಆಸ್ಪತ್ರೆ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ಈ ಸಂದರ್ಭ ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಜಿ.ಪಂ ಮಾಜಿ ಸದಸ್ಯ ವಿನಯ ನಾಯ್ಕಾ ತಲಪಾಡಿ ಮುಖ್ಯ ಅತಿಥಿಗಳಾಗಿದ್ದರು.
ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸದಸ್ಯ ದಿನೇಶ್ ರೈ, ಸಮಾಜಸೇವಕ ಆದಂ ಹಾಜಿ, ನವಾರ್ ಉಳ್ಳಾಲ್, ಉದ್ಯಮಿ ಮಹಮ್ಮದ್ ಅಶ್ರಫ್, ಏಂಟಿ ಪೊಲ್ಯೂಷನ್ ಡ್ರೈವ್ ಸ್ವಯಂ ಸೇವಾ ಸಂಸ್ಥೆಯ ಸ್ಥಾಪಕ ಅಬ್ದುಲ್ ರಹಿಮಾನ್, ಡಾ.ಹಬೀಬ್, ಡಾ.ಕಾರ್ತಿಕ್ ಉಪಸ್ಥಿತರಿದ್ದರು. ಆಸ್ಪತ್ರೆ ಅಧೀಕ್ಷಕಿ ಶಕುಂತಳಾ ಕಾರ್ಯಕ್ರಮ ನಿರ್ವಹಿಸಿದರು. ಸುಧಾಕರ್ ಕುದ್ರೋಳಿ ಸ್ವಾಗತಿಸಿದರು. ಮಾಧ್ಯಮ ಸಲಹೆಗಾರ ಭಾಸ್ಕರ ಅರಸ್ ವಂದಿಸಿದರು.