ಉಳ್ಳಾಲ: ರಸ್ತೆಗೆ ಆಲದ ಮರ ಉರುಳಿಬಿದ್ದು ದ್ವಿಚಕ್ರ ಸವಾರನಿಗೆ ಗಾಯ
Update: 2017-06-25 18:23 IST
ಉಳ್ಳಾಲ, ಜೂ.25: ರಸ್ತೆಗೆ ಆಲದ ಮರ ಉರುಳಿಬಿದ್ದು ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಬೀರಿ- ದೇರಳಕಟ್ಟೆ ರಸ್ತೆಯಲ್ಲಿ ರವಿವಾರ ಬೆಳಗ್ಗಿನ ಜಾವ ಸಂಭವಿಸಿದೆ.
ಮಾಡೂರು ಹರಿ ಬಡಾವಣೆ ನಿವಾಸಿ ಅವಿನಾಶ್ ಮಾಡೂರು(28) ಗಂಭೀರ ಗಾಯಗೊಂಡವರು.
ದ್ವಿಚಕ್ರ ವಾಹನದಲ್ಲಿ ಮಾಡೂರಿನ ಮನೆಯಿಂದ ತೊಕ್ಕೊಟ್ಟು ಕಡೆಗೆ ತೆರಳುವ ಸಂದರ್ಭ ಜೋರಾಗಿ ಬೀಸಿದ್ದ ಗಾಳಿಯಿಂದಾಗಿ ಹಲವು ವರ್ಷಗಳಿಂದ ರಸ್ತೆಬದಿಯಲ್ಲಿದ್ದ ಬೃಹತ್ ಗಾತ್ರದ ಆಲದ ಮರ ಉರುಳಿಬಿದ್ದಿದೆ.
ಮರದ ಕೊಂಬೆಯೊಂದು ಅವಿನಾಶ್ ತಲೆಭಾಗಕ್ಕೆ ಬಿದ್ದು ಸ್ಕೂಟರ್ ಸಮೇತ ಅವರು ರಸ್ತೆಗೆ ಉರುಳಿಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಮರ ತೆರವುಗೊಳಿಸುವಲ್ಲಿ ಶ್ರಮಿಸಿದ್ದಾರೆ.