×
Ad

ದಲಿತ ಕಾಲನಿಗಳಲ್ಲಿ ಶಾಂತಿ ಸಭೆಗೆ ಆಗ್ರಹ

Update: 2017-06-25 18:34 IST

ಮಂಗಳೂರು, ಜೂ.25: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಅಹಿತಕರ ಘಟನೆ ಹಿನ್ನೆಲೆಯಲ್ಲಿ ದಲಿತ ಯುವಕರನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ದಲಿತ ಕಾಲನಿಗಳಲ್ಲಿ ಶಾಂತಿ ಸಭೆ ನಡೆಸಬೇಕು ಎಂಬ ಆಗ್ರಹ ದಲಿತ ನಾಯಕರಿಂದ ವ್ಯಕ್ತವಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯುಕ್ತ ಟಿ.ಆರ್.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮಾಸಿಕ ದಲಿತ ಕುಂದು ಕೊರತೆಗಳ ಸಭೆಯಲ್ಲಿ ದಲಿತ ನಾಯಕ ರಘುವೀರ್ ಅವರಿಂದ ವ್ಯಕ್ತವಾಯಿತು.

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಆಟೋ ಚಾಲಕರು ಪ್ರಯಾಣಿಕರನ್ನು ಲೂಟಿ ಮಾಡುತ್ತಿದ್ದಾರೆ. ಅಲ್ಲಿಗೆ ಆಟೋ ಪ್ರಿಪೇಯ್ಡಿ, ಸಿಸಿ ಕ್ಯಾಮರಾ ಅಳವಡಿಸಬೇಕು ಎಂದೂ ರಘುವೀರ್ ಸೂಟರ್‌ಪೇಟೆ ಒತ್ತಾಯಿಸಿದರು.

 ಏಳಿಂಜೆ, ಕೊಕುಡೆ, ಪಂಜ ಮೊದಲಾದ ಕಡೆ ದಲಿತರು ವಾಸವಿದ್ದು, ಅಲ್ಲಿ ನೆರೆ ಭೀತಿಯ ವಾತಾವರಣವಿದೆ. ತಗ್ಗು ಪ್ರದೇಶವಾದ ಕಾರಣ ನೆರೆ ಬರುತ್ತದೆ. ನೆರೆ ಬಂದಾಗ ತಕ್ಷಣ ಅಲ್ಲಿನ ನಿವಾಸಿಗಳನ್ನು ರಕ್ಷಿಸುವ ವ್ಯವಸ್ಥೆಯಾಗಬೇಕು ಎಂದರು ದಲಿತ ಮುಖಂಡರೊಬ್ಬರು ಹೇಳಿದರು.

 ದಲಿತ ನಾಯಕ ಸುಕೇಶ್ ಮಾತನಾಡಿ, ಅನುದಾನಿತ ಶಾಲೆಗಳಲ್ಲಿ ಬಡವರನ್ನು ಸುಲಿಗೆ ಮಾಡಲಾಗುತ್ತಿದೆ. ಆರ್‌ಟಿಇ ಪ್ರಕಾರ ನೀಡುವ ಸೀಟು ದೊರೆಯುತ್ತಿಲ್ಲ. ದಲಿತರಿಗೆ ಶುಲ್ಕದಲ್ಲೂ ರಿಯಾಯಿತಿ ನೀಡುತ್ತಿಲ್ಲ ಎಂದು ಆಪಾದಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹನುಮಂತರಾಯ ಹೇಳಿದರು.

 ಕಳೆದ ಸಭೆಯಲ್ಲಿ ಅನಧಿಕೃತ ಪೇಯಿಂಗ್ ಗೆಸ್ಟ್‌ಗಳ ಬಗ್ಗೆ ವ್ಯಕ್ತವಾದ ದೂರಿಗೆ ಸಂಬಂಧಿಸಿ ಈಗಾಗಲೇ ಕೆಲವು ಠಾಣೆಗಳಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ಮಹಾನಗರಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುವುದು. ಪರಿಶಿಷ್ಟ ಜಾತಿ-ಪಂಗಡ ಹಾಸ್ಟೆಲ್‌ಗಳಿಗೂ ಎಸಿಪಿ ಹಂತದ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ ಎಂದು ಡಿಸಿಪಿ ಹನುಮಂತರಾಯ ಪ್ರತಿಕ್ರಿಯಿಸಿದರು.

ಮಂಗಳೂರು ನಗರದಲ್ಲಿ ನಕಲಿ ಮಸಾಜ್ ಸೆಂಟರ್‌ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಕಳೆದ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಅಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ತಕ್ಷಣ ಕರೆ ಮಾಡಿ ತಿಳಿಸಿ. ಧಾಳಿ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಶಾಂತರಾಜು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News