ವೈಯಕ್ತಿಕ ದ್ವೇಷ ಘಟನೆಗೆ ಕಾರಣ: ಪೊಲೀಸ್
ಬೆಳ್ತಂಗಡಿ, ಜೂ. 26: ಮರಳು ವ್ಯಾಪಾರಿ ಸಹಿತ ಇಬ್ಬರು ಯುವಕರಿಗೆ ಚೂರಿಯಿಂದ ಇರಿದು ಗಂಭೀರ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬರಮೇಲು ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ಬಂಟ್ವಾಳ ತಾಲೂಕಿನ ಕೊಲ್ತಮಜಲು ಗ್ರಾಮದ ಪಳ್ಳಿಪಾಡಿ ನಿವಾಸಿಗಳಾದ ಮುಹಮ್ಮದ್ ಇರ್ಫಾನ್(28) ಮತ್ತು ನಿಸಾರ್(25) ಹಲ್ಲೆಗೊಳಗಾದ ಯುವಕರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಇಬ್ಬರು ಅಣ್ಣ ತಂಗಿಯ ಪುತ್ರರು.
ಮರಳು ವ್ಯಾಪಾರಿಯಾಗಿರುವ ಇರ್ಫಾನ್‌ಗೆ ಜುಲೈ ತಿಂಗಳಿನಲ್ಲಿ ಮದುವೆ ನಡೆಯಲಿದ್ದು ಮದುವೆಗೆ ಆಮಂತ್ರಿಸಲೆಂದು ಬೆಳ್ತಂಗಡಿ ಗುರುವಾಯನಕೆರೆ ಸಮೀಪದ ಹೆಣ್ಣಿನ ಮನೆಗೆ ರವಿವಾರ ರಾತ್ರಿ ನಿಸಾರ್‌ನ ರಿಕ್ಷಾದಲ್ಲಿ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದ ವೇಳೆ ಮಾರ್ಗದ ಮಧ್ಯೆ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಹೆಣ್ಣಿನ ಮನೆಯಲ್ಲಿದ್ದ ಸಂದರ್ಭದಲ್ಲಿ ಇರ್ಫಾನ್‌ನ ಮೊಬೈಲ್‌ಗೆ ಮರಳು ಬೇಕೆಂದು ಕರೆಯೊಂದು ಬಂದಿದ್ದು ದಾರಿ ಮಧ್ಯೆ ಕರೆ ಮಾಡಿದವರು ಮತ್ತು ಇರ್ಫಾನ್ ಭೇಟಿಯಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು ವೈಯಕ್ತಿಕ ದ್ವೇಷದಿಂದ ಹಲ್ಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ. ಹಲ್ಲೆಗೊಳಗಾದವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅವರಿಂದ ಮಾಹಿತಿ ಪಡೆದ ಬಳಿಕ ಸತ್ಯಾಂಶ ತಿಳಿದು ಬರಲಿದೆ ಎಂದು ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ.
ಗಂಭೀರ ಹಲ್ಲೆಗೊಳಗಾದ ಇರ್ಫಾನ್, ನಿಸಾರ್‌ರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಮತ್ತು ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.