ಮಾತಿನ ಚಕಮಕಿ- ಹೊಯ್‌ಕೈ: ಪೊಲೀಸರಿಂದ ಪರಿಸ್ಥಿತಿ ನಿಯಂತ್ರಣ
ಮಂಗಳೂರು, ಜೂ. 26: ಉಳ್ಳಾಲದಲ್ಲಿ ‘ಪೆರ್ನಾಳ್’ ಆಚರಣೆಗೆ ಸಂಬಂಧಿಸಿ ಉಂಟಾಗಿದ್ದ ಗೊಂದಲದ ಹಿನ್ನೆಲೆಯಲ್ಲಿ ರವಿವಾರ ಉಪವಾಸ ಮುಂದುವರಿಸಿದ್ದ ಕೆಲವರು ಇಂದು ಇಲ್ಲಿನ ಕೇಂದ್ರ ಜುಮಾ ಮಸೀದಿಯಲ್ಲಿ ಮತ್ತೆ ಈದ್ ನಮಾಝ್ ನಡೆಸಿದ ಘಟನೆ ನಡೆಯಿತು.
ನಿನ್ನೆ ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸಿದ್ದು, ಇಂದು ಮಧ್ಯಾಹ್ನ 12.15ರ ಸುಮಾರಿಗೆ ಉಳ್ಳಾಲ ಮಿಲ್ಲತ್ ನಗರದ ಖತೀಬ್ ಶಿಹಾಬ್ ಸಖಾಫಿ ನೇತೃತ್ವದಲ್ಲಿ ಕೇಂದ್ರ ಜುಮಾ ಮಸೀದಿಯಲ್ಲಿ ಮತ್ತೆ ಈದ್ ನಮಾಝ್ ನಿರ್ವಹಿಸಲು ಬಂದಿದ್ದ ಸಂದರ್ಭ ಮಸೀದಿ ಒಳಗಡೆಯ ಬಾಗಿಲು ಹಾಕಿದ್ದರಿಂದ ಕೆಲ ಹೊತ್ತು ಎರಡು ತಂಡಗಳ ನಡುವೆ ಮಾತಿನ ಚಕಮಕಿ ಹಾಗೂ ಹೊಯ್‌ಕೈ ನಡೆಯಿತು.
ಕೆಲ ಹೊತ್ತು ಅಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿದ ಉಳ್ಳಾಲ ಇನ್ಸ್‌ಪೆಕ್ಟರ್ ಹಾಗೂ ಸ್ಥಳದಲ್ಲಿ ಜಮಾಯಿಸಿದ್ದ ಪೊಲೀಸ್ ತಂಡವು ಪರಿಸ್ಥಿತಿಯನ್ನು ಹತೋಟಿಗೆ ತಂದಿತು. ಬಳಿಕ ಮಸೀದಿಯ ಬಾಗಿಲು ತೆರೆದು ನಮಾಝ್‌ಗೆ ಅವಕಾಶ ನೀಡಲಾಯಿತು. ಉಳ್ಳಾಲ ಠಾಣಾ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ನೇತೃತ್ವದಲ್ಲಿ ಪೊಲೀಸ್ ರಕ್ಷಣೆ ಒದಗಿಸಲಾಯಿತು.
ಈ ನಡುವೆ, ಮಸೀದಿಯ ಬಾಗಿಲು ತೆರೆಯುವುದಕ್ಕೆ ಸಂಬಂಧಿಸಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ಹಾಗೂ ಹೊಯ್‌ಕೈ ನಡೆದ ಸಂದರ್ಭ ಉಳ್ಳಾಲ ಮಾಸ್ತಿಕಟ್ಟೆಯ ನಿವಾಸಿ ಮುಹಮ್ಮದ್ ರಿಲ್ವಾನ್ (28) ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಭಟ್ಕಳದಲ್ಲಿ ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲಾ ಖಾಝಿಯವರು ಪರಸ್ಪರ ಸಮಾಲೋಚನೆ ನಡೆಸಿ ರವಿವಾರ ಪೆರ್ನಾಳ್ ಆಚರಿಸಲು ಕರೆ ನೀಡಿದ್ದರು. ಆದರೆ ಉಳ್ಳಾಲದ ಖಾಝಿ ಕೂರತ್ ತಂಙಳ್ ರಿಂದ ರವಿವಾರ ಪೆರ್ನಾಳ್ ಹಬ್ಬ ಆಚರಣೆ ಘೋಷಣೆಯಾಗದಿದ್ದುದರಿಂದ ಉಳ್ಳಾಲದಲ್ಲಿ ಕೆಲವರು ರವಿವಾರವೂ ಉಪವಾಸ ಮುಂದುವರಿಸಿ ಸೋಮವಾರ ಪೆರ್ನಾಳ್ ಆಚರಿಸಲು ನಿರ್ಧರಿಸಿದ್ದರು. ಅದರಂತೆ ಇಂದು ಮಸೀದಿಯಲ್ಲಿ ನಮಾಝ್‌ಗೆ ತೆರಳಿದಾಗ ಈ ಘಟನೆ ಸಂಭವಿಸಿದ್ದಾಗಿ ತಿಳಿದುಬಂದಿದೆ.